ಜೈಪುರ (ರಾಜಸ್ಥಾನ): ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ಗೆ ಕಾಂಗ್ರೆಸ್ ಶಾಸಕರು ಬೆಂಬಲಿಸುವಂತೆ ಕೇಳುವ ಮೂಲಕ ಬಿಜೆಪಿ ನಾಯಕಿ ಮತ್ತು ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಸಹಾಯ ಮಾಡಿದ್ದಾರೆ ಎಂದು ಬಿಜೆಪಿ ಮಿತ್ರಪಕ್ಷ ಆರ್‌ಎಲ್‌ಪಿ ಆರೋಪಿಸಿದೆ.
ಆರ್‌ಎಲ್‌ಪಿಯ ಈ ಆರೋಪ ರಾಜಸ್ಥಾನದ ರಾಜಕೀಯ ಕೋಲಾಹಲದಲ್ಲಿ ಹೊಸ ತಿರುವು ಪಡೆದುಕೊಂಡಿದೆ.
ಉಪಮುಖ್ಯಮಂತ್ರಿ ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಸ್ಥಾನದಿಂದ ತೆಗೆದು ಹಾಕಲ್ಪಟ್ಟಿರುವ ಸಚಿನ್ ಪೈಲಟ್, ಗೆಹ್ಲೋಟ್ ಸರ್ಕಾರದಲ್ಲಿ ಬಹಮತವಿಲ್ಲ ಎಂದು ಆರೋಪಿಸಿ ಶಾಸಕರೊಂದಿಗೆ ಫೇರ್‌ಮಾಂಟ್ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ (ಆರ್‌ಎಲ್‌ಪಿ) ಮುಖ್ಯಸ್ಥ ಹನುಮಾನ್ ಬೆನಿವಾಲ್ ಅವರು, #Gehlot_Vasundhara_Gathjod ಎಂಬ ಟ್ವಿಟರ್ ಅಭಿಯಾನ ಆರಂಭಿಸಿದ್ದಾರೆ. ಇವರ ಈ ಅಭಿಯಾನಕ್ಕೆ ಅನೇಕ ಲೈಕ್ಸ್ ಮತ್ತು ರಿಟ್ವೀಟ್‌ಗಳು ಬಂದಿವೆ.
"ಬಹುಮತ ಇಲ್ಲದಿರುವ ಅಶೋಕ್ ಗೆಹ್ಲೋಟ್‌ರನ್ನು ಬೆಂಬಲಿಸುವಂತೆ ವಸುಂಧರಾ ರಾಜೇ ವೈಯಕ್ತಿಕವಾಗಿ ಕಾಂಗ್ರೆಸ್ ಶಾಸಕರನ್ನು ಕರೆದಿದ್ದಾರೆ" ಎಂದು ಹನುಮಾನ್ ಬೆನಿವಾಲ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ರಾಜಸ್ಥಾನ ಬಿಜೆಪಿಗೆ ಅವರು ಈ ಟ್ವೀಟ್ ಅನ್ನು ಟ್ಯಾಗ್ ಮಾಡಿದ್ದಾರೆ.