ಕೋವಿಡ್ ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಪರೀಕ್ಷಿಸಲು ವಿಶ್ವದಾದ್ಯಂತ ಸಂಶೋಧಕರು ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಇದು ಒಂದು ಅರ್ಧ ಯುದ್ದವಾಗಿದೆ, ನಿಜವಾದ ಯುದ್ದ ಕೋವಿಡ್ ಲಸಿಕೆ ಸಿದ್ದವಾದಾಗ ಶುರುವಾಗಲಿದೆ.
ಕೋವಿಡ್ -19 ಲಸಿಕೆ ವಿತರಣೆಗೆ ಕೋಲ್ಡ್ ಸ್ಟೋರೇಜ್ ನಿರ್ಣಾಯಕವಾಗಿದೆ :
ಶೀತ ತಾಪಮಾನದಲ್ಲಿ ಇಡಬೇಕಾದ ಲಸಿಕೆ, ಹೆಚ್ಚಿನ ತಾಪಮಾನಕ್ಕೆ ಒಡ್ಡಿಕೊಂಡಾಗ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಉದಾಹರಣೆಗೆ, ಫಿಜರ್ ತಯಾರಿಸಿದ ಲಸಿಕೆಯನ್ನು -70 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇಡಬೇಕಾಗುತ್ತದೆ, ಇದು ಅಂಟಾರ್ಟಿಕಾದ ಚಳಿಗಾಲಕ್ಕಿಂತ ತಂಪಾಗಿರುತ್ತದೆ. ಆದ್ದರಿಂದ, ಭಾರತಕ್ಕೆ ಹೆಚ್ಚಿನ ಸಂಖ್ಯೆಯ ಡೋಸೇಜ್‌ಗಳನ್ನು ಲಭ್ಯವಾದರೆ, ಅದನ್ನು ಸಂರಕ್ಷಿಸಿಡಲು ಪರಿಣಾಮಕಾರಿ ಕೋಲ್ಡ್ ಚೈನ್ ಸೌಲಭ್ಯಗಳು ಬೇಕಾಗುತ್ತವೆ.
ಭಾರತದ ಕೋಲ್ಡ್ ಸ್ಟೋರೇಜ್ ಸಾಮರ್ಥ್ಯ | ಪ್ರಮಾಣಗಳ ಸಂಖ್ಯೆ |
ಸರ್ಕಾರದ ಸಾಮರ್ಥ್ಯ | 200-250 ಮಿಲಿಯನ್ |
ಖಾಸಗಿ ವಲಯದ ಸಾಮರ್ಥ್ಯ | 250-300 ಮಿಲಿಯನ್ |
ಒಟ್ಟು ಸಾಮರ್ಥ್ಯ | 450-550 ಮಿಲಿಯನ್ |
ಪ್ರಸ್ತುತ ಭಾರತದಲ್ಲಿರುವ ವಿದ್ಯುತ್ ಮತ್ತು ವಿದ್ಯುತ್ ರಹಿತ ಕೋಲ್ಡ್ ಸ್ಟೋರೇಜ್ಗಳು | |
ವಿದ್ಯುತ್ | |
ಉಪಕರಣ | ತಾಪಮಾನ (ಡಿಗ್ರಿ ಸೆಲ್ಸಿಯಸ್) |
ಕೋಲ್ಡ್ ರೂಮ್ಸ್ | 2 ರಿಂದ 8 |
ವಾಕ್ ಇನ್ ಕೂಲರ್ | 2 ರಿಂದ 8 |
ವಾಕ್ ಇನ್ ಫ್ರೀಝರ್ | -15 ರಿಂದ -25 |
ಐಸ್ ಲೇನ್ಡ್ ರೆಫ್ರಿಜರೇಟರ್ | 2 ರಿಂದ 8 |
ಡೀಪ್ ಫ್ರೀಜರ್ | -15 ರಿಂದ -25 |
ವಿದ್ಯುತ್ ರಹಿತ | |
ಕೋಲ್ಡ್ ಬಾಕ್ಸ್ | 2 ರಿಂದ 8 |
ಲಸಿಕೆ ವಾಹಕ | 2 ರಿಂದ 8 |
ಕೋಲ್ಡ್ ಚೈನ್ ಎಂದರೇನು?
ಕೋವಿಡ್ ಲಸಿಕೆಯನ್ನು ವಿಶ್ವದ ಮೂಲೆ ಮೂಲೆಗೆ ತಲುಪಿಸುವುದು ಒಂದು ಸವಾಲಿನ ಕಾರ್ಯವಾಗಿದೆ. ಜೀವ ಉಳಿಸುವ ಈ ಉತ್ಪನ್ನವನ್ನು ಸಂಗ್ರಹಿಸಲು, ನಿರ್ವಹಿಸಲು ಮತ್ತು ಸಾಗಿಸಲು ತಾಪಮಾನ - ನಿಯಂತ್ರಿತ ಪರಿಸರದಲ್ಲಿ ನಿಖರವಾದ ಸರಪಳಿ ವ್ಯವಸ್ಥೆ ಬೇಕಾಗುತ್ತದೆ. ಇದನ್ನು ಕೋಲ್ಡ್ ಚೈನ್ ಎಂದು ಕರೆಯಲಾಗುತ್ತದೆ.
ಲಸಿಕೆಗಳನ್ನು ತಯಾರಿಸಿದ ಸಮಯದಿಂದ ವ್ಯಾಕ್ಸಿನೇಷನ್ ಕ್ಷಣದವರೆಗೆ, ಅವುಗಳನ್ನು ಸೂಕ್ತ ತಾಪಮಾನದಲ್ಲಿ ಸಂಗ್ರಹಿಸಬೇಕು. ಯಾಕೆಂದರೆ, ತುಂಬಾ ಹೆಚ್ಚು ಅಥವಾ ಕಡಿಮೆ ತಾಪಮಾನದಿಂದ ಲಸಿಕೆ ತನ್ನ ಶಕ್ತಿ ( ರೋಗಿಯನ್ನು ರಕ್ಷಿಸುವ ಸಾಮರ್ಥ್ಯ) ಯನ್ನು ಕಳೆದುಕೊಳ್ಳಲು ಕಾರಣವಾಗಬಹುದು.
ಪ್ರಮುಖ ಕೋವಿಡ್ -19 ಲಸಿಕೆಗಳ ತಾಪಮಾನ ಶ್ರೇಣಿ :
ಲಸಿಕೆಯನ್ನು ಮೈನಸ್ 70 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂಗ್ರಹಿಸಿಟ್ಟುಕೊಳ್ಳುವ ಅಗತ್ಯವಿರುತ್ತದೆ. ಆದರೆ, ಪ್ರಸ್ತುತ ಹೆಚ್ಚಿನ ದೇಶಗಳಲ್ಲಿ ಕೋಲ್ಡ್ ಸ್ಟೋರೇಜ್ ಸಾಮರ್ಥ್ಯವು ಎರಡು ರಿಂದ ಎಂಟು ಡಿಗ್ರಿ ಸೆಲ್ಸಿಯಸ್ ಮಾತ್ರ ಇದೆ.
ಆಕ್ಸ್‌ಫರ್ಡ್, ಜಾನ್ಸನ್ ಆ್ಯಂಡ್ ಜಾನ್ಸನ್ ಮತ್ತು ನೊವಾವ್ಯಾಕ್ಸ್ ಕೋವಿಡ್-19 ಲಸಿಕೆಗಳು ಭಾರತದಲ್ಲಿ ವಿತರಣೆಗೆ ಅಗ್ರ ಪಟ್ಟಿಯಲ್ಲಿವೆ. ಯಾಕೆಂದರೆ, ಈ ಲಸಿಕೆಗಳು ಬೆಚ್ಚಗಿನ ತಾಪಮಾನದಲ್ಲಿ ಸಂರಕ್ಷಿಸಿಡಬಹುದಾಗಿದೆ.
ಲಸಿಕೆ ಸಂಸ್ಥೆಗಳು | ಕೋಲ್ಡ್ ಚೈನ್ |
ಫಿಜರ್/ಬಯೋಟೆಕ್ | -70 ಡಿಗ್ರಿ ಸೆಲ್ಸಿಯಸ್ |
ಮಾಡರ್ನಾ | -20 ಡಿಗ್ರಿ ಸೆಲ್ಸಿಯಸ್ |
ಆಕ್ಸ್‌ಫರ್ಡ್ / ಅಸ್ಟ್ರಾಜೆನೆಕಾ | 2-8 ಡಿಗ್ರಿ |
ಜಾನ್ಸನ್ ಆ್ಯಂಡ್ ಜಾನ್ಸನ್ | 2-8 ಡಿಗ್ರಿ |
ನೊವಾವ್ಯಾಕ್ಸ್ | 2-8 ಡಿಗ್ರಿ |
ಭಾರತದಲ್ಲಿ ಕೋಲ್ಡ್ ಸ್ಟೋರೇಜ್ ಮೂಲಸೌಕರ್ಯಗಳ ಕೊರತೆಯ ಹಿಂದಿನ ಕಾರಣ
ಸಾಕಷ್ಟು ಮೂಲಸೌಕರ್ಯಗಳ ಕೊರತೆ, ತರಬೇತಿ ಪಡೆದ ಸಿಬ್ಬಂದಿ ಕೊರತೆ, ಹಳೆಯ ತಂತ್ರಜ್ಞಾನ ಮತ್ತು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಭಾರತದಲ್ಲಿ ಕೋಲ್ಡ್ ಚೈನ್ ಮೂಲಸೌಕರ್ಯಗಳ ಬೆಳವಣಿಗೆಗೆ ಪ್ರಮುಖ ಅಡೆತಡೆಗಳಾಗಿವೆ.
ಸಾರಿಗೆ
ಸೂಕ್ತ ಜಾಗತಿಕ ಸಮಯ ಮತ್ತು ತಾಪಮಾನ - ಸೂಕ್ಷ್ಮ ವಿತರಣಾ ವ್ಯವಸ್ಥೆಗಳ ಮೂಲಕ ಲಸಿಕೆಗಳ ವಿತರಣೆಯಲ್ಲಿ ವಾಯು ಸರಕು ( ಏರ್ ಕಾರ್ಗೋ) ಪ್ರಮುಖ ಪಾತ್ರ ವಹಿಸುತ್ತದೆ. ಕೋವಿಡ್-19 ಲಸಿಕೆಗಳು ಲಭ್ಯವಿರುವಾಗ ತ್ವರಿತ ಮತ್ತು ಪರಿಣಾಮಕಾರಿ ಸಾಗಣೆ ಮತ್ತು ವಿತರಣೆಗೆ ವಾಯು ಸರಕು ಸಾಮರ್ಥ್ಯವು ನಿರ್ಣಾಯಕವಾಗಿರುತ್ತದೆ. ಸರ್ಕಾರಗಳು ಉದ್ದಿಮೆದಾರರ ಬೆಂಬಲದೊಂದಿಗೆ ಈ ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ಏರ್ಪಡಿಸದಿದ್ದರೆ ಸುಲಭ ಲಸಿಕೆ ವಿತರಣೆ ಅಸಾಧ್ಯ.
ಮುಂಬೈನ ಚತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಸಿಎಸ್ಎಂಐಎ) ಕೋವಿಡ್ -19 ಲಸಿಕೆಯ ಸುರಕ್ಷಿತ ಸಾಗಣೆಗೆ ಸ್ವತಃ ತಯಾರಿ ಆರಂಭಿಸಿದೆ. ಏಷ್ಯಾದ ಅತಿದೊಡ್ಡ ಲಸಿಕೆ ಆಮದು ಮತ್ತು ಕೋಲ್ಡ್ ಸ್ಟೋರೇಜ್ಗೆ ಇದು ಪ್ರಮುಖ ನೆಲೆಯಾಗಲಿದೆ. 30 ಸಾವಿರ ಟನ್ಗಳಷ್ಟು ಕೋಲ್ಡ್ ಸ್ಟೋರೇಜ್ ಶೇಖರಣಾ ಸಾಮರ್ಥ್ಯವನ್ನು ಹೊಂದಿರುವ ಸಿಎಸ್ಎಂಐಎ, ಭಾರತದಲ್ಲಿ ಲಸಿಕೆ ಸಂಗ್ರಹ ಮತ್ತು ವಿತರಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.
ಮುಂಬೈ ವಿಮಾನ ನಿಲ್ದಾಣವು ಏಷ್ಯಾದ ಅತಿದೊಡ್ಡ ತಾಪಮಾನ ನಿಯಂತ್ರಿತ ರಫ್ತು ಫಾರ್ಮಾ ಎಕ್ಸಲೆನ್ಸ್ ಸೆಂಟರ್ ಅನ್ನು ಹೊಂದಿದೆ, 4 ಸಾವಿರ ಚದರ ಮೀಟರ್ ವಿಸ್ತೀರ್ಣದಲ್ಲಿರುವ ಇದು, ವಾರ್ಷಿಕ 35 ಸಾವಿರ ಟನ್ಗಳಷ್ಟು ನಿರ್ವಹಣಾ ಸಾಮರ್ಥ್ಯವನ್ನು ಹೊಂದಿದೆ.
ಲಸಿಕೆ ವಿತರಣೆಗೆ ಮೀಸಲಾದ ಟ್ರಕ್ ಹಡಗುಕಟ್ಟೆಗಳು ಮತ್ತು ಎಕ್ಸರೆ ಯಂತ್ರಗಳನ್ನು ಒದಗಿಸಲು ಸಿಎಸ್‌ಎಂಐಎ ಸಿದ್ಧತೆ ನಡೆಸುತ್ತಿದೆ. ವಿಮಾನದಲ್ಲಿ ಸರಕುಗಳನ್ನು ಲೋಡ್ ಮಾಡಲು ಬಳಸಲಾಗುವ ಯುನಿಟ್ ಲೋಡ್ ಸಾಧನ ನಿರ್ಮಾಣ ಕಾರ್ಯವನ್ನು ಇದು ಮಾಡುತ್ತಿದೆ.
+ 25 ಡಿಗ್ರಿ ಸೆಲ್ಸಿಯಸ್ನಿಂದ -20 ಸೆಲ್ಸಿಯಸ್ವರೆಗಿನ ಕೋಲ್ಡ್ ಸ್ಟೋರೇಜ್ ರೂಂಗಳು ಮತ್ತು ಸಿ. ಡಿಗ್ರಿ ಸೆಲ್ಸಿಯಸ್ನಿಂದ 40 ಡಿಗ್ರಿ ಸೆಲ್ಸಿಯಸ್ವರೆಗಿನ ಅತ್ಯಾಧುನಿಕ ಸಮಯ ಮತ್ತು ತಾಪಮಾನ - ಸೂಕ್ಷ್ಮ ವಿತರಣಾ ವ್ಯವಸ್ಥೆಯ ಮೂಲಕ ಲಸಿಕೆಗಳ ವಿತರಣೆಯಲ್ಲಿ ಪ್ರಮುಖ ಪಾತ್ರ ವಹಿಸಲು ದೆಹಲಿ ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳು ಸಿದ್ದವಾಗುತ್ತಿವೆ ಎಂದು ಈ ವಿಮಾನ ನಿಲ್ದಾಣಗಳನ್ನು ನಿರ್ವಹಿಸುವ ಜಿಎಂಆರ್ ಗ್ರೂಪ್ ತಿಳಿಸಿದೆ.
ಕೋಲ್ಡ್ ಚೈನ್ ಸ್ಟೋರೇಜ್ ಮತ್ತು ಸಾರಿಗೆ ವ್ಯವಸ್ಥೆಒದಗಿಸುವ ಪ್ರಮುಖ ದೇಶೀಯ ಲಾಜಿಸ್ಟಿಕ್ಸ್ ಸಂಸ್ಥೆಗಳು :
ಕಂಪನಿ | ಸಾಮರ್ಥ್ಯ | ಅಭಿಪ್ರಾಯ |
ಸ್ನೋಮ್ಯಾನ್ ಲಾಜಿಸ್ಟಿಕ್ಸ್ | 1 ಲಕ್ಷ ಪ್ಯಾಲೆಟ್‌ಗಳು, 289 ವಾಹನಗಳು, 33 ಗೋದಾಮುಗಳು | ಅತಿದೊಡ್ಡ ಸಂಘಟಿತ ಸಂಸ್ಥೆ, ಎಲ್ಲಾ ಆಹಾರ ಶೇಖರಣಾ ಗೋದಾಮುಗಳನ್ನು ಬಳಸಿಕೊಳ್ಳಲು ಸಾಧ್ಯವಾದರೆ ಶೇಖರಣಾ ಸಾಮರ್ಥ್ಯವನ್ನು 650 ಮಿಲಿಯನ್ ಡೋಸ್ಗೆ ಹೆಚ್ಚಿಸಬಹುದು |
ಗಟಿ ಕೌಸರ್ | 5,500 ಪ್ಯಾಲೆಟ್‌ಗಳು, 160 ವಾಹನಗಳು | ಪ್ರಾಥಮಿಕ / ದ್ವಿತೀಯ ವಿತರಣೆ, ಮೀಸಲಾದ ರೀಫರ್ ಫ್ಲೀಟ್, ಆರೋಗ್ಯ ರಕ್ಷಣೆ ಸೇರಿದಂತೆ ಅನೇಕ ಕೈಗಾರಿಕೆಗಳಿಗೆ ಕಸ್ಟಮೈಸ್ ಮಾಡಿದ ಕೋಲ್ಡ್ ಚೈನ್ ಸೊಲ್ಯೂಷನ್ಸ್ |
ಪ್ಯೂಚರ್ ಸಪ್ಲೈ ಚೈನ್ ಸೊಲ್ಯೂಷನ್ಸ್ | 8,400 ಪ್ಯಾಲೆಟ್‌ಗಳು, 4 ವಿತರಣಾ ಕೇಂದ್ರಗಳು | ಶೇಖರಣಾ ತಾಪಮಾನವು -25 ಡಿಗ್ರಿ ಸೆಲ್ಸಿಯಸ್ನಿಂದ + 25 ಡಿಗ್ರಿ ಸೆಲ್ಸಿಯಸ್ವರೆಗೆ |
ಟ್ರಾನ್ಸ್ಪೋರ್ಟ್ ಕಾರ್ಪೋರೇಶನ್ ಆಫ್ ಇಂಡಿಯಾ | 7000 ಪ್ಯಾಲೆಟ್‌ಗಳು | ಕೃಷಿ ಉತ್ಪನ್ನಗಳು, ಸಂಸ್ಕರಿಸಿದ ಆಹಾರಗಳು, ಎಫ್‌ಎಂಸಿಜಿ, ಆರೋಗ್ಯ ಉತ್ಪನ್ನಗಳು ಇತ್ಯಾದಿಗಳನ್ನು ಸಂಗ್ರಹಿಸಿ ಸಾಗಿಸುತ್ತದೆ |
ಮಹೀಂದ್ರಾ ಲಾಜಿಸ್ಟಿಕ್ಸ್ | ಎನ್ ಎ | ಅತ್ಯಾಧುನಿಕ ತಾಪಮಾನ ನಿಯಂತ್ರಿತ ಔಷಧಿಗಳ ಗೋದಾಮನ್ನು ಇತ್ತೀಚೆಗೆ ತೆರೆದಿದೆ |
ಭಾರತದಲ್ಲಿ ಕೋವಿಡ್ ಲಸಿಕೆ ವಿತರಣಾ ಸಿದ್ದತೆ :
ಕೋವಿಡ್ ಲಸಿಕೆಯ ನಿರ್ವಹಣೆಗಾಗಿ ಭಾರತ ಸರ್ಕಾರ ತಜ್ಞರ ಸಮಿತಿಯನ್ನು ರಚಿಸಿದೆ. ಕೋವಿಡ್ ಲಸಿಕೆ ನಿಯಂತ್ರಣಕ್ಕಾಗಿ ಹೊಸ ಹೊಸ ನಿರ್ದೇಶನಗಳನ್ನು ನೀಡಲು ಮತ್ತು ವಿಶ್ವದಾದ್ಯಂತ ನಡೆಯುತ್ತಿರುವ ಕೋವಿಡ್ ಲಸಿಕೆಯ ಪ್ರಯತ್ನಗಳಲ್ಲಿ ಭಾರತವನ್ನು ಮುಂಚೂಣಿಯಲ್ಲಿಡುವುದು ಈ ಸಮಿತಿಯ ಉದ್ದೇಶವಾಗಿದೆ.
ಕೋವಿಡ್ ನಿರ್ವಹಣೆಗಾಗಿ ಸರ್ಕಾರ ರಚಿಸಿದ ತಜ್ಞರ ಸಮಿತಿ, ಭಾರತದಲ್ಲಿ ಕೋವಿಡ್ ಲಸಿಕೆಯ ವಿತರಣಾ ತಂತ್ರವನ್ನು ಹೇಗೆ ರೂಪಿಸಬೇಕು, ಯಾರಿಗೆ ಮೊದಲ ಲಸಿಕೆ ನೀಡಬೇಕು ಮತ್ತು ಕೋಲ್ಡ್ ಸ್ಟೋರೇಜ್ ವ್ಯವಸ್ಥೆಯನ್ನು ಹೇಗೆ ಮಾಡಿಕೊಳ್ಳಬೇಕು ಎಂಬುವುದರ ಬಗ್ಗೆ ಸರ್ಕಾರಕ್ಕೆ ನಿರ್ದೇಶನ ನೀಡಲಿದೆ.
ಎಲೆಕ್ಟ್ರಾನಿಕ್ ಲಸಿಕೆ ಗುಪ್ತಚರ ಜಾಲ (ಇವಿನ್)
ಇವಿನ್ ಎಂದರೇನು?
ಎಲೆಕ್ಟ್ರಾನಿಕ್ ಲಸಿಕೆ ಗುಪ್ತಚರ ಜಾಲವು ಲಸಿಕೆ ದಾಸ್ತಾನುಗಳನ್ನು ಡಿಜಿಟಲೀಕರಣಗೊಳಿಸುವ ಮೂಲಕ ಸರಿಯಾದ-ಸಮಯದ ಮಾಹಿತಿಯನ್ನು ನೀಡುತ್ತದೆ ಮತ್ತು ಸ್ಮಾರ್ಟ್ ಫೋನ್ ಅಪ್ಲಿಕೇಶನ್ ಮೂಲಕ ಕೋಲ್ಡ್ ಚೈನ್‌ನ ತಾಪಮಾನವನ್ನು ಪರಿಶೀಲಿಸುತ್ತದೆ. ಇವಿನ್ ತಂತ್ರಜ್ಞಾನವನ್ನು 2015 ರಲ್ಲಿ ಭಾರತದ 12 ರಾಜ್ಯಗಳಲ್ಲಿ ಪ್ರಾರಂಭಿಸಲಾಯಿತು. ಕೋಲ್ಡ್ ಚೈನ್ ಪಾಯಿಂಟ್‌ಗಳಲ್ಲಿ ಉತ್ತಮವಾದ ಲಸಿಕೆ ನಿರ್ವಹಣೆಗೆ ಇದು ಸಹಾಯ ಮಾಡುತ್ತದೆ.
ಲಸಿಕೆ ಸರಬರಾಜು ಮತ್ತು ದೇಶಾದ್ಯಂತ 25 ಸಾವಿರ ಕೋಲ್ಡ್ ಚೈನ್ ಪಾಯಿಂಟ್‌ಗಳನ್ನು ಸರಿಯಾದ ಸಮಯದಲ್ಲಿ ಮೇಲ್ವಿಚಾರಣೆ ಮಾಡುವ, ಯುಐಪಿ ಅಡಿ ಎಲೆಕ್ಟ್ರಾನಿಕ್ ಲಸಿಕೆ ಗುಪ್ತಚರ ಜಾಲ (ಇವಿಐಎನ್) ಅನ್ನು ಕೋವಿಡ್ -19 ಲಸಿಕೆ ವಿತರಿಸಲು ನಿಯೋಜಿಸಲಾಗುವುದು ಮತ್ತು ವಿಸ್ತರಿಸಲಾಗುವುದು.
ಲಸಿಕೆ ಫಲಾನುಭವಿ ನಿರ್ವಹಣಾ ವ್ಯವಸ್ಥೆ
ಕೋವಿಡ್-19 ಲಸಿಕೆ ಪಡೆಯುವ ಎಲ್ಲ ಫಲಾನುಭವಿಗಳ ವೈಯಕ್ತಿಕ ಟ್ರ್ಯಾಕಿಂಗ್ಗಾಗಿ ಎಲೆಕ್ಟ್ರಾನಿಕ್ ಲಸಿಕೆ ಗುಪ್ತಚರ ಜಾಲ (ಇವಿನ್) ಮಾಡ್ಯೂಲ್ನ ಮುಂದುವರೆದ ಭಾಗವಾಗಿ, ಕೋವಿಡ್-19 ವ್ಯಾಕ್ಸಿನೇಷನ್ ಫಲಾನುಭವಿ ನಿರ್ವಹಣಾ ವ್ಯವಸ್ಥೆ (ಸಿವಿಬಿಎಂಎಸ್) ಯನ್ನು ರಚಿಸಲಾಗುತ್ತಿದೆ.
ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಕರು :
ವಿವಿಧ ದೇಶಗಳ ಕೋವಿಡ್ ಲಸಿಕೆ ಉತ್ಪಾದನಾ ಸಾಮರ್ಥ್ಯ(ಮಿಲಿಯನ್ ಪ್ರಮಾಣದಲ್ಲಿ, 2020-21 ಅವಧಿಯ ಅಂದಾಜು)
ದೇಶ | ಪ್ರಮಾಣ ( ಮಿಲಿಯನ್ಗಳಲ್ಲಿ) |
ಯುಎಸ್ಎ | 4,686 |
ಭಾರತ | 3,130 |
ಚೀನಾ | 1,900 |
ನಾರ್ವೆ | 1,150 |
ಫ್ರಾನ್ಸ್ | 1,100 |
ಯುಕೆ | 951 |
ಸ್ವಿಟ್ಜರ್ಲೆಂಡ್ | 900 |
ಜರ್ಮನಿ | 501 |
ಜೆಕ್ ಗಣರಾಜ್ಯ | 500 |
ನೆದರ್ಲ್ಯಾಂಡ್ಸ್ | 500 |
ದಕ್ಷಿಣ ಕೊರಿಯಾ | 350 |