ಅಹಮದಾಬಾದ್(ಗುಜರಾತ್): ಕೋವಿಡ್ -19 ಸಾಂಕ್ರಾಮಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಅಹಮದಾಬಾದ್‌ನಲ್ಲಿ ಉತ್ತರಾಯಣ ಹಬ್ಬವನ್ನು ಸರಳವಾಗಿ ಆಚರಿಸಿದರು.
ಹಬ್ಬದ ಸಂದರ್ಭದಲ್ಲಿ ತಮ್ಮ ಊರಿಗೆ ಭೇಟಿ ನೀಡಿರುವ ಶಾ, ಅಲ್ಲಿನ ಜಗನ್ನಾಥ ದೇವಸ್ಥಾನಕ್ಕೆ ತಮ್ಮ ಕುಟುಂಬ ಸದಸ್ಯರೊಂದಿಗೆ ತೆರಳಿ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಜೊತೆಗೆ ಆರತಿ ಬೆಳಗಿ ಸಂಪ್ರದಾಯದಂತೆ ದೇವಾಲಯದಲ್ಲಿ ಹಸು ಮತ್ತು ಆನೆಯನ್ನು ಪೂಜಿಸಿದರು.
'ಉತ್ತರಾಯಣದ ಶುಭ ಸಂದರ್ಭವಾದ ಇಂದು ಅಹಮದಾಬಾದ್‌ನ ಪ್ರಸಿದ್ಧ ಶ್ರೀ ಜಗನ್ನಾಥ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದೆವು. ಭಗವಾನ್ ಜಗನ್ನಾಥನು ಎಲ್ಲರಿಗೂ ಆಶೀರ್ವದಿಸಲಿ. ಜೈ ಜಗನ್ನಾಥ್!' ಎಂದು ಶಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಅಮಿತ್ ಶಾ ಅವರ ಭೇಟಿಗೂ ಮುನ್ನ ದೇವಾಲಯದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.