ನವದೆಹಲಿ: ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಇಲ್ಲಿನ ಟ್ರಂಪ್ ಸರ್ಕಾರಿ ಶಾಲೆಗೆ ಆಗಮಿಸಿ ಮಕ್ಕಳ ಜೊತೆ ಬೆರೆತರು. ಶಾಲೆಗೆ ಬಂದ ಅತಿಥಿಗೆ ಮಕ್ಕಳು ಉಭಯ ದೇಶದ ಧ್ವಜಗಳನ್ನು ಹಿಡಿದು ಪ್ರೀತಿಯ ಸ್ವಾಗತ ಕೋರಿದರು.
ಮೋತಿಬಾಗ್‌ನ ಸರ್ವೋದಯ ಶಾಲೆಯಲ್ಲಿ 15 ರಿಂದ 20 ನಿಮಿಷಗಳ ಕಾಲ ಮಕ್ಕಳು ಹಾಗೂ ಶಿಕ್ಷಕರ ಜೊತೆ ಮೆಲಾನಿಯಾ ಸಂವಾದ ನಡೆಸಿದ್ದಾರೆ. ಇನ್ನು ಇವರ ಬರುವಿಕೆಯ ಹಿನ್ನೆಲೆಯಲ್ಲಿ ಶಾಲೆಯನ್ನು ಅದ್ಧೂರಿಯಾಗಿ ಶೃಂಗರಿಸಲಾಗಿತ್ತು.
ಶಾಲಾ ಮಕ್ಕಳೂ ಕೂಡ ಬಣ್ಣಬಣ್ಣದ ಚೂಡಿಗಳು ಮತ್ತು ಘಾಗ್ರಾ-ಚೋಲಿಯಂತಹ ವಸ್ತ್ರಗಳನ್ನು ಧರಿಸಿ ಮುದ್ದಾಗಿ ಕಾಣುತ್ತಿದ್ದರು.
ಮೆಲಾನಿಯಾ ಟ್ರಂಪ್ ಶಾಲೆಗೆ ಹೋಗುವ ಮಾರ್ಗವನ್ನು ಕೂಡ ಅದ್ಧೂರಿಯಾಗಿ ಶೃಂಗರಿಸಲಾಗಿತ್ತು. ಅಲ್ಲದೆ, ಮಕ್ಕಳೂ ಕೂಡ ಬಣ್ಣಬಣ್ಣದ ಚೂಡಿಗಳು ಮತ್ತು ಘಾಗ್ರಾ-ಚೋಲಿಯಂತಹ ವಸ್ರ್ತಗಳನ್ನು ಧರಿಸಿ ಮುದ್ದಾಗಿ ಕಾಣುತ್ತಿದ್ದರು.
ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮಂತಹ ಮಕ್ಕಳ ಜೊತೆ ಸಮಾಲೋಚಿಸಿದ ಒಳ್ಳೆಯ ವಿಚಾರಗಳನ್ನು ಅಮೆರಿಕದ ಮಕ್ಕಳಿಗೆ ತಿಳಿಸುತ್ತೇನೆ. ನನ್ನ ಅಲೋಚನೆಯ 'ಬಿ ಬೆಸ್ಟ್' ಎಂಬ ಸೂತ್ರ ಇಟ್ಟುಕೊಂಡು ಮಕ್ಕಳ ಒಟ್ಟಾರೆ ಯೋಗಕ್ಷೇಮಕ್ಕೆ ಪ್ರಾಮುಖ್ಯತೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಅಮೆರಿಕದಲ್ಲಿ ಮಕ್ಕಳ ಶ್ರೇಯೋಭಿವೃದ್ದಿಗೆ ನಾನು 'ಬಿ ಬೆಸ್ಟ್' ಯೋಜನೆ ಮೂಲಕ ಕೆಲಸ ಮಾಡುತ್ತಿದ್ದೇನೆ. ಮಕ್ಕಳನ್ನು ಡ್ರಗ್ ಚಟದಿಂದ ದೂರವಿರಿಸುವುದು, ಆನ್‌ಲೈನ್ ಸುರಕ್ಷತೆ ಬಗ್ಗೆ ತಿಳಿಸುವುದು ಮತ್ತು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವುದು ಈ ಚಿಂತನೆಯ ಮೂರು ಆಧಾರಸ್ತಂಭಗಳು ಎಂದು ಅವರು ತಿಳಿಸಿದರು.
ಮುಂದುವರೆದು ಮಾತನಾಡಿರುವ ಅವರು, ಭಾರತಕ್ಕೆ ಇದು ನನ್ನ ಮೊದಲ ಭೇಟಿ. ಸಾಂಪ್ರದಾಯಿಕ ನೃತ್ಯದ ಮೂಲಕ ನನ್ನನ್ನು ಸ್ವಾಗತಿಸಿದ್ದಕ್ಕಾಗಿ ಧನ್ಯವಾದ. ಹಾಗೆಯೇ ಇಲ್ಲಿನ ಜನರು ಕೂಡ ನಮ್ಮನ್ನು ತುಂಬಾ ಆದರದಿಂದ ಸ್ವಾಗತಿಸಿರುವುದಕ್ಕೆ ಚಿರಋಣಿ ಎಂದಿದ್ದಾರೆ.
ಶಾಲೆಯ ವಿದ್ಯಾರ್ಥಿಗಳು ಸಾಂಪ್ರದಾಯಿಕ ನೃತ್ಯ ಪ್ರದರ್ಶನ ನೀಡಿ ಅಮೆರಿಕ ಪ್ರಥಮ ಮಹಿಳೆಯನ್ನು ಸಂತಸಪಡಿಸಿದರು. ಅಲ್ಲದೆ, ವಿದ್ಯಾರ್ಥಿಗಳು ತಾವೇ ಚಿತ್ರಿಸಿದ ಮದುಬನಿ ವರ್ಣಚಿತ್ರಗಳ ಉಡುಗೊರೆಗಳನ್ನು ನೀಡಿದರು. ನಂತರ ಮೆಲಾನಿಯಾ ಎಲ್ಲರಿಗೂ ಶುಭಾಶಯ ತಿಳಿಸಿ ಶಾಲೆಯಿಂದ ಹೊರಟರು.