ನ್ಯೂಯಾರ್ಕ್: ತೀರಾ ಗಂಭೀರ ಆರೋಗ್ಯ ಪರಿಸ್ಥಿತಿಯಲ್ಲಿರುವ ಕೊರೊನಾ ಸೋಂಕಿತರ ಚಿಕಿತ್ಸೆಗೆ ರಕ್ತ ಶುದ್ಧೀಕರಣ ಉಪಕರಣ ಬಳಸಲು ಅಮೆರಿಕೆಯ ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್ಡಿಎ) ಸಚಿವಾಲಯ ಅನುಮತಿ ನೀಡಿದೆ. ಕೋವಿಡ್-19 ಸೋಂಕು ತಗುಲಿರುವ 18 ವರ್ಷ ಅಥವಾ ಅದಕ್ಕೂ ಮೇಲ್ಪಟ್ಟ, ಆರೋಗ್ಯ ವ್ಯವಸ್ಥೆ ತೀರಾ ಹದಗೆಟ್ಟು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಚಿಕಿತ್ಸೆಗೆ ಮಾತ್ರ ಈ ಉಪಕರಣ ಬಳಸಲು ಅವಕಾಶ ನೀಡಲಾಗಿದೆ. ಅದರಲ್ಲೂ ಶ್ವಾಸ ವ್ಯವಸ್ಥೆ ವೈಫಲ್ಯವಾಗುವ ಸಾಧ್ಯತೆ ಹೆಚ್ಚಿರುವ ಪ್ರಕರಣಗಳಲ್ಲಿ ಇದನ್ನು ಉಪಯೋಗಿಸಬಹುದಾಗಿದೆ.
ರಕ್ತ ಶುದ್ಧೀಕರಣ ಉಪಕರಣವು ಸೈಟೋಕಿನ್ಸ್ (cytokines)ಗಳ ಸಂಖ್ಯೆ ತಗ್ಗಿಸಿ ಮತ್ತು ಇತರ ಸೋಂಕು ಹರಡುವ ವಾಹಕಗಳಾದ, ರಕ್ತಪರಿಚಲನೆಯೊಂದಿಗೆ ಹರಿದಾಡುವ ಜೀವಕೋಶದ ಪ್ರತಿರೋಧಕ ಶಕ್ತಿಯನ್ನು ನಿಯಂತ್ರಿಸುವ ಸಣ್ಣ ಕ್ರಿಯಾಶೀಲ ಪ್ರೋಟೀನ್ಗಳ ಸಂಖ್ಯೆಯನ್ನು ನಿಯಂತ್ರಿಸುವ ಮೂಲಕ ರಕ್ತದ ಶುದ್ಧೀಕರಣ ಹಾಗೂ ಹೊಸ ರಕ್ತವನ್ನು ಪೂರೈಸುವ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಹೊಸ ಚಿಕಿತ್ಸಾ ವಿಧಾನವು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯ ಪರಿಸ್ಥಿತಿಯನ್ನು ಸುಧಾರಿಸಲು ನೆರವಾಗಲಿದೆ ಎಂದು ಅಮೆರಿಕ ಎಫ್ಡಿಎ ಕಮೀಷನರ್ ಸ್ಟೀಫನ್ ಎಂ. ಹಾನ್ ತಿಳಿಸಿದ್ದಾರೆ.
ಕೋವಿಡ್-19 ರೋಗಿಗಳಿಗೆ ಸೋಂಕು ತಗುಲಿದ ಆರಂಭಿಕ ಹಂತದಲ್ಲಿ 'ಸೈಟೋಕೈನ್ ಸ್ಟಾರ್ಮ್' (cytokine storm) ನಿಂದಾಗಿ ಸಂಭವಿಸಬಹುದಾದ ಅಂಗಾಂಗ ವೈಫಲ್ಯತೆ, ಶ್ವಾಸಕೋಶ ವೈಫಲ್ಯತೆ, ಅತಿ ವೇಗವಾಗಿ ಸೋಂಕು ವೃದ್ಧಿ ಹಾಗೂ ಸಾವಿನ ಪ್ರಮಾಣಗಳನ್ನು ಕಡಿಮೆ ಮಾಡಲು ರಕ್ತ ಶುದ್ಧೀಕರಣ ಉಪಕರಣ ಸಹಾಯಕವಾಗಲಿದೆ.