ಲಕ್ನೋ (ಉತ್ತರ ಪ್ರದೇಶ): ಬಹುಜನ ಸಮಾಜ ಪಕ್ಷದ ಶಾಸಕ ಮತ್ತು ಮಾಫಿಯಾ ಡಾನ್ ಮುಖ್ತಾರ್ ಅನ್ಸಾರಿ ಪುತ್ರರಾದ ಅಬ್ಬಾಸ್ ಅನ್ಸಾರಿ ಮತ್ತು ಉಮರ್ ಅನ್ಸಾರಿ ಸುಳಿವು ನೀಡಿದವರಿಗೆ ಪೊಲೀಸರು ತಲಾ 25 ಸಾವಿರ ರೂ.ಗಳ ಬಹುಮಾನ ಘೋಷಿಸಿದ್ದಾರೆ. ಅಕ್ರಮ ಭೂ ಕಬಳಿಕೆ ಪ್ರಕರಣಗಳಲ್ಲಿ ಇಬ್ಬರು ಸಹೋದರರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಅಬ್ಬಾಸ್ ಅನ್ಸಾರಿ ಅಂತಾರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದು, ಘೋಸಿಯಿಂದ 2017ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ಅಬ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು.
ಮುಟ್ಟುಗೋಲು ಹಾಕಿಕೊಂಡ ಭೂಮಿಯನ್ನು ಕಸಿದುಕೊಳ್ಳುವುದು, ಕಳ್ಳಸಾಗಣೆ ಮತ್ತು ಇತರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಘಾಜಿಪುರ ಪೊಲೀಸರು ದರೋಡೆಕೋರ ಕಾಯ್ದೆಯಡಿ ಮುಖ್ತಾರ್ ಪತ್ನಿ ಅಫ್ಷಾ ಅನ್ಸಾರಿ, ಅವರ ಸಹೋದರರಾದ ಶಾರ್ಜಿಲ್ ರಾಜಾ ಮತ್ತು ಅನ್ವರ್ ಶೆಹಜಾದ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಭೂ ಕಬಳಿಕೆ ಮತ್ತು ಅಕ್ರಮ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಬ್ಬಾಸ್ ಮತ್ತು ಉಮರ್ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದು ಲಕ್ನೋ ಪೊಲೀಸ್ ಆಯುಕ್ತ ಸುಜೀತ್ ಪಾಂಡೆ ತಿಳಿಸಿದ್ದಾರೆ.
ಐಷಾರಾಮಿ ದಾಲಿಬಾಗ್ ಪ್ರದೇಶದಲ್ಲಿ ಅಬ್ಬಾಸ್ ಅನ್ಸಾರಿಗೆ ಸೇರಿದ ಎರಡು ಕಟ್ಟಡಗಳನ್ನು ಆಗಸ್ಟ್ 27ರಂದು ರಾಜ್ಯ ಸರ್ಕಾರ ನೆಲಸಮ ಮಾಡಿದೆ.
ಇಬ್ಬರು ಸಹೋದರರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸುವಂತೆ ಪೊಲೀಸರು ನ್ಯಾಯಾಲಯವನ್ನು ಕೋರಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಮುಖ್ತಾರ್ ಅನ್ಸಾರಿಯನ್ನು ಉತ್ತರ ಪ್ರದೇಶಕ್ಕೆ ಕರೆತರಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಮುಖ್ತಾರ್ನನ್ನು ಪ್ರಸ್ತುತ ಪಂಜಾಬ್‌ನ ರೋಪರ್ ಜೈಲಿನಲ್ಲಿ ಇರಿಸಲಾಗಿದೆ.
ರಾಜ್ಯ ಸರ್ಕಾರವು ಈಗಾಗಲೇ ಮಾಫಿಯಾ ಡಾನ್ ಮುಖ್ತಾರ್ ಅನ್ಸಾರಿ ಸಾಮ್ರಾಜ್ಯವನ್ನು ಭೇದಿಸಿದ್ದು, ವಾರಣಾಸಿ, ಗಾಜಿಪುರ, ಮಾವು ಮತ್ತು ಜೌನ್‌ಪುರದಲ್ಲಿ ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ.