ಉತ್ತರಪ್ರದೇಶ: ಬೇರೆ ಯುವಕನನ್ನು ಮಗಳು ಲವ್ ಮಾಡ್ತಿದ್ದಾಳೆ ಎಂದು ತಿಳಿದ ತಂದೆಯೊಬ್ಬ ಮರ್ಯಾದೆಗೆ ಹೆದರಿದ್ದಾರೆ. ಇದರಿಂದ ಮನೆತನದ ಗೌರವ ಹಾಳಾಗುತ್ತಿದೆ ಎಂದು ತನ್ನ ಮಗಳನ್ನೇ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಪರೈ ಗ್ರಾಮದಲ್ಲಿ ನಡೆದಿದೆ.
23 ವರ್ಷದ ಅರ್ಜುನ್ ಜೊತೆ ವೀರ್ಪಲ್ ಮಗಳು ಲವ್ನಲ್ಲಿದ್ದಳಂತೆ. ಈ ವಿಷಯ ವೀರ್ಪಲ್ಗೆ ತಿಳಿದಿದೆ. ಮನೆತನದ ಗೌರವವನ್ನು ಹಾಳು ಮಾಡುತ್ತಿದ್ದಾಳೆ ಎಂಬ ಕಾರಣಕ್ಕೆ ವೀರ್ಪಲ್ ಮನಸ್ತಾಪಕ್ಕೆ ಗುರಿಯಾಗಿದ್ದು, ಮಗಳ ಕೊಲೆಗೆ ಸ್ಕೆಚ್ ಹಾಕಿದ್ದಾನೆ.
ವೀರ್ಪಲ್ ಮಗಳಿಗೆ ಮಾದಕ ದ್ರವ್ಯ ನೀಡಿದ್ದಾನೆ. ಬಳಿಕ ಸ್ನೇಹಿತನ ಜೊತೆಗೂಡಿ ಸಮೀಪದ ಕಾಲುವೆಗೆ ತೆರಳಿದ್ದಾರೆ. ಮೂರ್ಛೆ ಹೋಗಿದ್ದ ಮಗಳನ್ನು ಇಬ್ಬರೂ ಸೇರಿ ಕಾಲುವೆಗೆ ಎಸೆದು ಯಾರಿಗೂ ತಿಳಿಯದಂತೆ ಮನೆಗೆ ವಾಪಸ್ಸಾಗಿದ್ದಾರೆ.
ಯುವತಿ ಕಾಣದಿದ್ದಾಗ ಅರ್ಜುನ್ಗೆ ಅನುಮಾನ ಬಂದಿದ್ದು, ಯುವಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಚಾಪರ್ ಪೊಲೀಸರು ಯುವತಿಯ ತಂದೆ ವೀರ್ಪಲ್ ಮತ್ತು ಆತನ ಕುಟುಂಬಸ್ಥರನ್ನು ವಿಚಾರಿಸಿದ್ದಾರೆ. ಈ ವೇಳೆ ಯುವತಿ ತಂದೆ ವೀರ್ಪಲ್ ಮತ್ತು ಆತನ ಕುಟುಂಬಸ್ಥರ ಹೇಳಿಕೆ ಬೇರೆ-ಬೇರೆಯಾಗಿವೆ. ಅನುಮಾನಗೊಂಡ ಪೊಲೀಸರು ವೀರ್ಪಲ್ನ್ನು ಬಂಧಿಸಿ ವಿಚಾರಿಸಿದಾಗ ಸತ್ಯ ಹೊರ ಬಂದಿದೆ.
ತನ್ನ ಮಗಳು ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಇದರಿಂದ ತಮ್ಮ ಮನೆತನದ ಗೌರವಕ್ಕೆ ಧಕ್ಕೆ ಬರುತ್ತದೆ ಎಂದು ತಿಳಿದು ಕೊಲೆ ಮಾಡಿದ್ದೇನೆ ಅಂತಾ ಆರೋಪಿ ತಂದೆ ಹೇಳಿದ್ದಾನೆ. ಈ ಘಟನೆ ಕುರಿತು ಪೊಲೀಸರು ಇಬ್ಬರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.