ಮೊರಾದಾಬಾದ್(ಉತ್ತರಪ್ರದೇಶ) : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಬಲಪಂಥೀಯ ಸಂಘಟನೆಯ ಅಧ್ಯಕ್ಷನೆಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮ ಮತ್ತು ಮನೆ ಮನೆಗೆ ತೆರಳಿ ದೇಣಿಗೆ ಸಂಗ್ರಹಿಸಿದ ಆರೋಪದ ಮೇಲೆ ಪ್ರೇಮ್‌ವೀರ್ ಸಿಂಗ್ ಎಂಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬಿಜೆಪಿಯ ಮೊರಾದಾಬಾದ್ ಜಿಲ್ಲಾ ಮುಖ್ಯಸ್ಥ ರಾಜ್‌ಪಾಲ್ ಸಿಂಗ್ ಚೌಹಾಣ್ ಅವರು ನೀಡಿದ ದೂರಿನ ಮೇರೆಗೆ ಮೊರಾದಾಬಾದ್ ಜಿಲ್ಲೆಯ ಮಜೋಲಾ ಪೊಲೀಸ್ ಠಾಣೆಯಲ್ಲಿ ಶನಿವಾರ ಎಫ್‌ಐಆರ್ ದಾಖಲಿಸಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಚೌಹಾಣ್, "ಹೊಸ ಸಂಘಟನೆಯ ಅಧ್ಯಕ್ಷನೆಂದು ಸುಳ್ಳು ಹೇಳಿಕೊಂಡು ಹಣವನ್ನು ಸಂಗ್ರಹಿಸುತ್ತಿದ್ದ ವ್ಯಕ್ತಿಯ ಬಗ್ಗೆ ತಿಳಿದ ತಕ್ಷಣ, ನಾನು ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಅವನ ವಿರುದ್ಧ ಎಫ್ಐಆರ್ ದಾಖಲಿಸಿದೆ.
ಪರಿಶೀಲನೆ ನಡೆಸದೆ ಯಾರಿಗೂ ದೇಣಿಗೆ ರೂಪದಲ್ಲಿ ಹಣ ನೀಡಬಾರದು ಎಂದು ಜನರಲ್ಲಿ ಮನವಿ ಮಾಡುತ್ತೇನೆ. ಆರೋಪಿ ಮತ್ತು ಆತನ ಸಹಾಯಕರನ್ನು ತಕ್ಷಣ ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾವು ಒತ್ತಾಯಿಸಿದ್ದೇವೆ" ಎಂದು ಹೇಳಿದ್ದಾರೆ.
"ವಿಶ್ವ ಹಿಂದೂ ಮಹಾಶಕ್ತಿ ಸಂಘಕ್ಕೆ ಸೇರಿದವರು ಎಂದು ಪ್ರೇಮವೀರ್ ಸಿಂಗ್ ಅವರ ಸೋಷಿಯಲ್ ಮೀಡಿಯಾ ಪೋಸ್ಟ್ಗಳಲ್ಲಿ ಹೇಳಿಕೊಂಡಿದ್ದಾರೆ ಮತ್ತು ದಾನಿಗಳಿಗೆ ನೀಡಿರುವ ರಶೀದಿಗಳಲ್ಲೂ ಇದೇ ಮಾಹಿತಿ ಇದೆ. ಶೀಘ್ರದಲ್ಲೇ ವ್ಯಕ್ತಿಯನ್ನು ಬಂಧಿಸಲಾಗುವುದು" ಎಂದು ಪೊಲೀಸರು ತಿಳಿಸಿದ್ದಾರೆ.