ರಾಯ್‌ಬರೇಲಿ (ಉತ್ತರ ಪ್ರದೇಶ): ಪತಿಯೊಬ್ಬ ತನ್ನ 27 ವರ್ಷದ ಗರ್ಭಿಣಿ ಪತ್ನಿಯನ್ನು ಕತ್ತು ಹಿಸುಕಿ, ದೇಹವನ್ನು ತುಂಡು ತುಂಡುಗಳನ್ನಾಗಿ ಕತ್ತರಿಸಿ ಹಿಟ್ಟಿನ ಗಿರಣಿಯಲ್ಲಿ ರುಬ್ಬಿದ್ದಾನೆ. ಬಳಿಕ ದೇಹದ ಭಾಗಗಳನ್ನು ಸುಟ್ಟು ವಿಕೃತಿ ಮೆರೆದಿರುವ ಘಟನೆ ರಾಯ್‌ಬರೇಲಿ ಜಿಲ್ಲೆಯಲ್ಲಿ ನಡೆದಿದೆ.
ಈ ಪ್ರಕರಣ ಜನವರಿ 4 ರಂದು ನಡೆದಿದ್ದು, ಮಂಗಳವಾರ ಮೃತ ಊರ್ಮಿಳಾಳ ದೊಡ್ಡ ಮಗಳು ಅಜ್ಜಿ ಮನೆಯಲ್ಲಿ ನಡೆದ ಘಟನೆಯನ್ನು ವಿವರಿಸಿದಾಗ ಈ ಕೃತ್ಯ ಬಯಲಾಗಿದೆ. ಈ ಕುರಿತು ತಕ್ಷಣವೇ ಕುಟುಂಬಸ್ಥರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.ಅಲ್ಲದೇ ಡೀಹ್ ಠಾಣಾ ಪೊಲೀಸರಿಗೂ ಮಾಹಿತಿ ರವಾನಿಸಿದ್ದಾರೆ. ಜನವರಿ 10ರಂದು ಊರ್ಮಿಳಾ ಸಹೋದರಿ ವಿದ್ಯಾ ದೇವಿ ಡೀಹ್ ಪೊಲೀಸ್ ಠಾಣೆಗೆ ತೆರಳಿ ರವೀಂದ್ರ ವಿರುದ್ಧ ದೂರು ನೀಡಿದ್ದರು. ಈ ದೂರಿನಲ್ಲಿ ರವೀಂದ್ರ ನನ್ನ ಸಹೋದರಿ ಊರ್ಮಿಳಾಳನ್ನು ಕೊಲೆಗೈಯಲು ಯತ್ನಿಸಿದ್ದಾನೆ ಎಂದು ತಿಳಿಸಿದ್ದಾಗಿ ಪೊಲೀಸ್ ಅಧಿಕಾರಿ ವಿನೀತ್ ಸಿಂಗ್ ಹೇಳಿದ್ದಾರೆ. ಈ ದೂರು ನೀಡಿದ ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರ ತಂಡ ನೇರವಾಗಿ ರವೀಂದ್ರನ ಮನೆಗೆ ತೆರಳಿದೆ.
ರವೀಂದ್ರ ಕುಮಾರ್ ಜನವರಿ 4 ರಂದು ಯುಪಿ ಪೊಲೀಸರಿಗೆ ಕರೆ ಮಾಡಿ, ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ತಿಳಿಸಿರುವುದಾಗಿ ಸಿಂಗ್ ಹೇಳಿದ್ದಾರೆ. 2011ರಲ್ಲಿ ರವೀಂದ್ರ ಹಾಗೂ ಊರ್ಮಿಳಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಂತರ ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಜನಿಸಿದ್ದಾರೆ.
ಪೊಲೀಸರ ಪ್ರಕಾರ, ರವೀಂದ್ರಗೆ ತನ್ನ ಕುಟುಂಬಕ್ಕೆ ಒಂದು ಗಂಡು ಬೇಕು ಎನ್ನುವ ಬಯಕೆಯಿತ್ತಂತೆ. ಸದ್ಯ ಆಕೆ ಗರ್ಭಿಣಿಯಾಗಿದ್ದು ಮತ್ತೆ ಹೆಣ್ಣು ಮಗು ಹುಟ್ಟಬಹುದೆಂಬ ಆತಂಕದಿಂದ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಿದ್ದಾರೆ. ಊರ್ಮಿಳಾಳ ದೊಡ್ಡ ಮಗಳು, ತಾಯಿಯ ಕೊಲೆಯಲ್ಲಿ ಅಜ್ಜ, ಚಿಕ್ಕಪ್ಪನ ಪಾತ್ರವಿದೆ ಎಂದೂ ಆರೋಪಿಸಿದ್ದಾಳೆ. ಪ್ರಕರಣದ ತನಿಖೆಗಾಗಿ ಪೊಲೀಸರು 6 ವಿಶೇಷ ತಂಡಗಳನ್ನು ರಚಿಸಿದ್ದು ಎಲ್ಲಾ ಆರೋಪಿಗಳನ್ನು ಬಂಧಿಸುವಲ್ಲಿ ತಂಡ ಯಶಸ್ವಿಯಾಗಿದೆ.
ತನಿಖೆಯ ವೇಳೆ ರವೀಂದ್ರ ಕುಮಾರ್, ತಾನು ಮಾಡಿದ್ದ ತಪ್ಪು ಒಪ್ಪಿಕೊಂಡಿದ್ದಾನೆ. ನನ್ನ ಹಾಗೂ ಪತ್ನಿಯ ನಡುವೆ ಮಾತಿಗೆ ಮಾತು ಬೆಳೆದಿದ್ದು, ಕೋಪಗೊಂಡು ಆಕೆಯ ಕತ್ತು ಹಿಸುಕಿದ್ದೇನೆ. ಅಲ್ಲದೇ ನಂತರ ಮೃತದೇಹವನ್ನು ಹರಿತವಾದ ಆಯುಧದಿಂದ ತುಂಡುತುಂಡಾಗಿ ಕತ್ತರಿಸಿ, ನಂತರ ಹಿಟ್ಟಿನ ಗಿರಣಿಯಲ್ಲಿ ಹಾಕಿ ಗ್ರೈಂಡ್ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ. ನಂತರ ದೇಹದ ಕೆಲ ಭಾಗಗಳಿಗೆ ಬೆಂಕಿ ಇಟ್ಟು ಸುಟ್ಟಿದ್ದೇನೆ ಎಂದು ತನ್ನ ನೀಚ ಕೃತ್ಯವನ್ನು ತಿಳಿಸಿದ್ದಾನೆ.
ಮೊಮ್ಮಗಳು ಘಟನೆಯನ್ನು ವಿವರಿಸಿದ ಕೂಡಲೇ ಮೃತಳ ಕುಟುಂಬಸ್ಥರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಆರೋಪಿ ರವೀಂದ್ರ ಕುಮಾರ್(35)ನನ್ನು ಅರೆಸ್ಟ್ ಮಾಡಿದ್ದಾರೆ. ಅಲ್ಲದೇ ಇತ್ತ ಸುಟ್ಟ ಊರ್ಮಿಳಾಳ ದೇಹದ ಭಾಗಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.