ನವದೆಹಲಿ: ದೇಶಾದ್ಯಂತ ಇಂದಿನಿಂದ ಅನ್ಲಾಕ್ 4.0 ಜಾರಿಗೊಂಡಿದ್ದು, ದೇಶದ ಜನರಿಗೆ ಮತ್ತಷ್ಟು ಸಡಿಲಿಕೆ ನೀಡಿ ಕೇಂದ್ರ ಗೃಹ ಸಚಿವಾಲಯ ಈಗಾಗಲೇ ಆದೇಶ ಹೊರಡಿಸಿದೆ. ಇದೀಗ ಭಾರತೀಯ ರೈಲ್ವೆ ಇಲಾಖೆ ಕೂಡ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತಷ್ಟು ರೈಲುಗಳ ಸಂಚಾರಕ್ಕೆ ಯೋಜನೆ ರೂಪಿಸಿದೆ.
ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ, ದೇಶದಲ್ಲಿ ಹೆಚ್ಚುವರಿಯಾಗಿ 100 ರೈಲುಗಳ ಸಂಚಾರಕ್ಕೆ ರೈಲ್ವೆ ಇಲಾಖೆ ಮುಂದಾಗಿದ್ದು, ಕೇಂದ್ರ ಗೃಹ ಸಚಿವಾಲಯದ ಬಳಿ ಅನುಮತಿ ಕೇಳಿದೆ ಎಂದು ವರದಿಯಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ಎಲ್ಲಾ ರಾಜ್ಯಗಳೊಂದಿಗೆ ಮಾತುಕತೆ ನಡೆಸಿ, ಮಾಹಿತಿ ಕಲೆಹಾಕಿದೆ ಎಂದು ತಿಳಿದು ಬಂದಿದೆ. ದೇಶದಲ್ಲಿ ಕೆಲವೇ ದಿನಗಳಲ್ಲಿ ಕೆಲವೊಂದು ಮಾರ್ಗಸೂಚಿಗಳೊಂದಿಗೆ ಮತ್ತಷ್ಟು ರೈಲುಗಳ ಓಡಾಟ ನಡೆಸುವುದು ಖಚಿತ ಎಂದು ಹೇಳಲಾಗುತ್ತಿದೆ.
100 ರೈಲುಗಳ ಪೈಕಿ ರೈಲ್ವೆ ಇಲಾಖೆ ಕೆಲ ಸಬ್ ಅರ್ಬನ್ ಹಾಗೂ ಸ್ಥಳೀಯ ರೈಲು ಸಂಚಾರ ಪ್ರಾರಂಭ ಮಾಡಲು ಮುಂದಾಗಿದೆ. ಸದ್ಯ ದೇಶದಲ್ಲಿ 230 ರೈಲುಗಳು ಓಡಾಡುತ್ತಿವೆ. ಹಾಗೇ ಸೆಪ್ಟೆಂಬರ್ 7ರಿಂದ ದೇಶಾದ್ಯಂತ ಮೆಟ್ರೋ ಸಂಚಾರ ಕೂಡ ಆರಂಭಗೊಳ್ಳುತ್ತಿದೆ.
ದೇಶಾದ್ಯಂತ ಲಾಕ್ಡೌನ್ ಘೋಷಣೆಯಾಗುತ್ತಿದ್ದಂತೆ ಮಾರ್ಚ್ 25ರಿಂದ ರೈಲ್ವೆ ಸಂಚಾರ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ತದನಂತರ ಕೆಲವೊಂದು ನಿರ್ಬಂಧಗಳೊಂದಿಗೆ ಕೆಲವೊಂದು ರೈಲುಗಳ ಪ್ರಯಾಣಕ್ಕೆ ಕೇಂದ್ರ ಗೃಹ ಸಚಿವಾಲಯ ಗ್ರೀನ್ ಸಿಗ್ನಲ್ ನೀಡಿತ್ತು. ಇದೀಗ ಮತ್ತಷ್ಟು ರೈಲುಗಳ ಓಡಾಟಕ್ಕೆ ಅನುಮತಿ ನೀಡುವ ಸಾಧ್ಯತೆ ದಟ್ಟವಾಗಿದೆ.