ಪುರಿ(ಒಡಿಶಾ): ವಿಶ್ವವಿಖ್ಯಾತ ಹಾಗೂ ಶತಮಾನಗಳ ಇತಿಹಾಸ ಹೊಂದಿರುವ ಜಗನ್ನಾಥನ ಸನ್ನಿಧಿಯಲ್ಲಿ ನಡೆಯಲಿರುವ ರಥಯಾತ್ರೆ (ಕಾರ ಹಬ್ಬ) ಮೇಲೆ ಕೋವಿಡ್-19 ಕರಿಛಾಯೆ ಆವರಿಸಿದೆ.
ರಥಯಾತ್ರೆಗೆ ಪುರಿಯಲ್ಲಿರುವ ಜಗನ್ನಾಥ ದೇವಾಲಯಕ್ಕೆ ಭಕ್ತರು ಸಾಗರೋಪಾದಿಯಲ್ಲಿ ಬರುತ್ತಾರೆ. ಈ ಬಾರಿಯೂ ರಥದಲ್ಲಿ ದೇವರ ಮೂರ್ತಿ ಇರಿಸಿ ನಡೆಯುವ ಮೆರವಣಿಗೆ ಕಣ್ತುಂಬಿಕೊಳ್ಳಲು ಅದೆಷ್ಟೋ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಸದ್ಯದ ಪರಿಸ್ಥಿತಿ ನೋಡಿದಾಗ ಈ ಬಾರಿ ರಥಯಾತ್ರೆ ನಡೆಯುತ್ತೋ, ಇಲ್ಲವೋ ಎಂಬ ಹತ್ತಾರು ಪ್ರಶ್ನೆಗಳು ಲಕ್ಷಾಂತರ ಮಂದಿ ಭಕ್ತರನ್ನು ಕಾಡುತ್ತಿವೆ.
ಕೊರೊನಾ ಹರಡುವಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಸಾಂಪ್ರದಾಯಿಕ ಹಬ್ಬವನ್ನು ಆಚರಿಸುವುದಾದ್ರೂ ಹೇಗೆ? ಅನುಮತಿ ಸಿಕ್ಕಿದ್ದೇ ಆದ್ರೆ ಲಕ್ಷಾಂತರ ಮಂದಿ ರಥಯಾತ್ರೆ ಕಣ್ತುಂಬಿಕೊಳ್ಳಲು ಇಲ್ಲಿನ ರಸ್ತೆಗಳಲ್ಲಿ ಜಮಾಯಿಸುತ್ತಾರೆ. ಸಾಮಾಜಿಕ ಅಂತರ ಕಾಪಾಡುವುದು ಕಷ್ಟವಾಗುತ್ತದೆ.
ಇಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಇಲ್ಲದಿದ್ದರೆ ಸೋಂಕು ಹರಡುವ ಸಾಧ್ಯತೆ ಇದೆ. ಈ ಎಲ್ಲಾ ಅಂಶಗಳನ್ನು ಗಮಿಸಿದಾಗ ಹಿಂದಿನ ವರ್ಷದಂತೆಯೇ ಈ ಬಾರಿ ರಥಯಾತ್ರೆ ಅದ್ಧೂರಿಯಾಗಿ ನಡೆಯೋದು ಅನುಮಾನ ಅಂತಲೇ ಹೇಳಲಾಗುತ್ತಿದೆ.
ಶತಮಾನಗಳಿಂದ ನಡೆದುಕೊಂಡು ಬಂದಿರುವ ಸಾಂಪ್ರದಾಯವನ್ನು ಮುರಿಯಲು ಇಲ್ಲಿನ ಆಡಳಿತ ಮಂಡಲಿ ಸಿದ್ಧವಿಲ್ಲ. 18ನೇ ಶತಮಾನದಲ್ಲಿ ಸಾಂಕ್ರಾಮಿಕ ರೋಗ ಕಂಡು ಬಂದಿತ್ತು. ಅಂತಹ ಸಂದರ್ಭದಲ್ಲೂ ಈ ಹಬ್ಬವನ್ನು ಮುಂದುವರಿಸಲಾಗಿತ್ತು ಎನ್ನಲಾಗಿದೆ.
ಒಂದು ವೇಳೆ ಈ ಹಬ್ಬವನ್ನು ಮಾಡಲೇಬೇಕಾದರೆ ಭಕ್ತರಿಗೆ ಅವಕಾಶ ಇರುವುದಿಲ್ಲ. ಅದು ಸಾಧ್ಯವೇ ಎಂಬುದರ ಜೊತೆಗೆ ಭಕ್ತರು ಸೇರದಿದ್ದರೆ ರಥವನ್ನು ಎಳೆಯೋರು ಯಾರು ಎಂಬ ಪ್ರಶ್ನೆಯೂ ಎದುರಾಗುತ್ತದೆ. ಹೀಗಿದ್ರೂ ದೇವಸ್ಥಾನದ ಸೇವಕರು ಮತ್ತವರ ಕುಟುಂಬದವರು ರಥವನ್ನು ಎಳೆಯುವ ಸಲಹೆಗಳನ್ನು ಕೆಲವರು ನೀಡಿದ್ದಾರೆ.
ಸದ್ಯ 200 ಮಂದಿ ಬಡಿಗೆ ಕೆಲಸಗಾರರು ರಥವನ್ನು ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಜಗನ್ನಾಥ ದೇವಸ್ಥಾನದ 754 ಸೇವಕರು ಮತ್ತು ಸಿಬ್ಬಂದಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ. ಎಲ್ಲರ ವರದಿ ನೆಗೆಟಿವ್ ಬಂದಿದೆ. ಇದರ ಹೊರತಾಗಿಯೂ ಸೇವಕರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ಔಷಧಿ ನೀಡಲಾಗುತ್ತಿದೆ.
ಪ್ರತಿ ವರ್ಷ ಜೂನ್, ಜುಲೈ ತಿಂಗಳಲ್ಲಿ ನಡೆಯಲಿರುವ ಜಗನ್ನಾಥನ ರಥಯಾತ್ರೆ ಈ ಬಾರಿ ನಡೆಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.