ನ್ಯೂಯಾರ್ಕ್: ಕೊರೊನಾ ಸೋಂಕಿನಿಂದ ಸಾವಿರಾರು ಜನ ಸಾವನ್ನಪ್ಪಿದ್ದು, ಹಲವು ಕುಟುಂಬಗಳು ಬೇರ್ಪಟ್ಟಿವೆ. ಸದ್ಯ ಈ ಸಾಂಕ್ರಾಮಿಕ ರೋಗದ ವಿನಾಶಕಾರಿ ಪರಿಣಾಮಗಳನ್ನು ಎದುರಿಸಲು ಪ್ರತಿಯೊಂದು ದೇಶವೂ ಈಗ ಸಿದ್ಧವಾಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕುರಿತ ಭಾಷಣದಲ್ಲಿ ಹೇಳಿದ್ದಾರೆ.
ಕೋವಿಡ್-19 ಈಗ ಹೆಚ್ಚಿನ ಎಲ್ಲಾ ದೇಶಗಳು ಎದುರಿಸುತ್ತಿರುವ ಪ್ರಮುಖ ಆರೋಗ್ಯ ಬಿಕ್ಕಟ್ಟು. ಹೀಗಾಗಿ ಎಲ್ಲ ದೇಶಗಳು ಈ ವಿಚಾರವಾಗಿ ಹೆಚ್ಚು ಗಮನಹರಿಸುತ್ತಿವೆ. ಭಯೋತ್ಪಾದಕ ಗುಂಪು ಇದನ್ನೇ ದುರ್ಬಳಕೆ ಮಾಡಿಕೊಂಡು ದಾಳಿಗಾಗಿ ಎದುರು ನೋಡುತ್ತಿರಬಹುದು. ಆದ್ದರಿಂದ ಎಲ್ಲಾ ರಾಷ್ಟ್ರಗಳು ಭದ್ರತೆ ಕುರಿತು ಜಾಗ್ರವಾಗಿರುವಂತೆ ನಿರ್ದೇಶಿಸಿದ್ದಾರೆ.
ಕೊರೊನಾ ವೈರಸ್ ಬಹಿರಂಗಪಡಿಸಿದ ದೌರ್ಬಲ್ಯ ಮತ್ತು ಸನ್ನದ್ಧತೆಯ ಕೊರತೆಯು ಜೈವಿಕ ಭಯೋತ್ಪಾದಕ ದಾಳಿಗೆ ಅವಕಾಶ ಮಾಡಿಕೊಡಬಹುದು. ಅಥವಾ ಯಾವುದೇ ಭಯೋತ್ಪಾದಕ ಶಕ್ತಿಗಳು ಜಾಗತಿಕ ವಿನಾಶಕ್ಕೆ ಪ್ರಯತ್ನಿಸಬಹುದು ಎಂದು ಗುಟೆರೆಸ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಕೊರೊನಾದಿಂದ ವಿಶ್ವದಲ್ಲಿ ಶಾಂತಿ ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಭದ್ರತಾ ಮಂಡಳಿ ನಿರ್ಧಾರಗಳು ನಿರ್ಣಾಯಕವಾಗಿರುತ್ತದೆ. ವಾಸ್ತವವಾಗಿ, ಭದ್ರತಾ ಮಂಡಳಿಯ ಏಕತೆ ಮತ್ತು ಸಂಕಲ್ಪದ ಸಂದೇಶವು ಈ ಆತಂಕಕಾರಿ ಸಮಯದಲ್ಲಿ ಬಹಳ ಪ್ರಾಮುಖ್ಯತೆ ಹೊಂದಿದೆ ಎಂದು ಗುಟೆರೆಸ್ ಅಭಿಪ್ರಾಯಪಟ್ಟಿದ್ದಾರೆ.