ಹೈದರಾಬಾದ್: ಭಾರೀ ಮಳೆಗೆ ಮನೆ ಕುಸಿದು ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿ, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಳೇ ಹೈದರಾಬಾದ್ ನಗರದ ಹುಸೇನ್ ಆಲಂ ಪ್ರದೇಶದಲ್ಲಿ ನಡೆದಿದೆ.
ಶತಮಾನಗಳಷ್ಟು ಹಳೆಯ ಮನೆ ಭಾರೀ ಮಳೆಗೆ ಕುಸಿದು ಬಿದ್ದಿದೆ. ಸದ್ಯ ಘಟನಾ ಸ್ಥಳಕ್ಕೆ ಎನ್‌ಡಿಆರ್‌ಎಫ್ ತಂಡ, ಅಗ್ನಿಶಾಮಕ ದಳ ಮತ್ತು ಪೊಲೀಸರು ಭೇಟಿ ನೀಡಿ ಸಂತ್ರಸ್ತರನ್ನು ಹೊರ ತೆಗೆಯುವ ಕಾರ್ಯ ನಡೆಸುತ್ತಿದ್ದಾರೆ. ಇನ್ನು ಗಾಯಾಳುಗಳನ್ನು ಒಸ್ಮಾನಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಸಾವನ್ನಪ್ಪಿದ್ದಾರೆ.
ಪರ್ವೀನ್ ಬೇಗಂ (42) ಮತ್ತು ಅನೀಸ್ ಬೇಗಂ (18) ಮೃತರು. ಎರಡು ವರ್ಷದ ಮಗು ಮತ್ತು ನಾಲ್ಕು ತಿಂಗಳ ಶಿಶು ಸೇರಿದಂತೆ ಐದು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮುಂದಿನ ಎರಡು ದಿನಗಳಲ್ಲಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಾಗರೂಕತೆಯಿಂದ ಮತ್ತು ಎಚ್ಚರದಿಂದಿರಿ ಎಂದು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮನವಿ ಮಾಡಿದ್ದಾರೆ.