ಉಜ್ಜಯಿನಿ/ಮಧ್ಯಪ್ರದೇಶ: ಚಿತಾಭಸ್ಮವನ್ನು ನದಿಗೆ ಬಿಡುವ ಸಲುವಾಗಿ ಶಿಪ್ರಾ ನದಿ ಬಳಿ ತಲುಪುವ ಸಲುವಾಗಿ ಎತ್ತುಗಳಿಲ್ಲದ ಕಾರಣ ಇಬ್ಬರು ಗಂಡು ಮಕ್ಕಳೇ ಗಾಡಿಯನ್ನೆಳೆದು ನದಿ ಬಳಿ ತೆರಳುತ್ತಿರುವ ಕರುಣಾಜನಕ ದೃಶ್ಯ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಕಂಡುಬಂದಿದೆ.
ಎತ್ತಿನಬಂಡಿಯಲ್ಲಿ ಮನೆಯ ಸಾಮಾನುಗಳನ್ನೆಲಾ ತುಂಬಿಕೊಂಡು ನಾಲ್ವರು ಸದಸ್ಯರ ಅಲೆಮಾರಿ ಕುಟುಂಬ ಸುಡುಬಿಸಿಲಿನಲ್ಲೇ ರಸ್ತೆಯಲ್ಲಿ ನಡೆಯುತ್ತಾ ಸಾಗಿದೆ.
ನನ್ನ ಸಹೋದರ ಮತ್ತು ಸಹೋದರಿ ದೀರ್ಘಕಾಲದ ಕಿಡ್ನಿ ಸಂಬಂಧಿತ ಕಾಯಿಲೆಯಿಂದಾಗಿ 2 ತಿಂಗಳ ಹಿಂದೆ ಮೃತಪಟ್ಟರು. ಇದ್ದ ಎರಡು ಎತ್ತುಗಳನ್ನು ಇವರ ಅಂತ್ಯಕ್ರಿಯೆ ನೆರವೇರಿಸುವ ಸಲುವಾಗಿ ಮಾರಿದೆವು. ಹೀಗಾಗಿ ಅವರ ಚಿತಾಭಸ್ಮ ಶಿಪ್ರಾ ನದಿಯಲ್ಲಿ ಬಿಡುವುದಕ್ಕಾಗಿ ನಾವೇ ಬಂಡಿಯನ್ನು ಎಳೆದುಕೊಂಡು ಹೋಗುತ್ತಿದ್ದೇವೆ ಎಂದು ಬಂಡಿ ಎಳೆಯುತ್ತಿದ್ದ 22 ವರ್ಷದ ಸುನಿಲ್ ಎಂಬ ಯುವಕ ವಿವರಿಸಿದ್ದಾನೆ. ಅಲ್ಲದೇ ಲಾಕ್ಡೌನ್ ಕಾರಣ ಯಾವುದೇ ಕೆಲಸವಿಲ್ಲದೇ ನಾವು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದೇವೆ. ಹೀಗಾಗಿ ಸರ್ಕಾರ ನೆರವು ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾನೆ.
ನಮಗೆ ಉಳಿದುಕೊಳ್ಳಲು ಮನೆ ಇಲ್ಲ. ಹೀಗಾಗಿ ಕೆಲಸ ಹುಡುಕಿಕೊಂಡು ನಾವು ಅಲೆಯುತ್ತಲೇ ಇರುತ್ತೇವೆ. ಆದ್ರೆ ಕೊರೊನಾ ಭೀತಿಯಿಂದ ಯಾವ ಊರುಗಳ ಜನರೂ ನಮ್ಮನ್ನು ಸೇರಿಸುತ್ತಿಲ್ಲ, ಕೊರೊನಾ ವೈರಸ್ ನಮ್ಮನ್ನು ಕಷ್ಟದ ಕೂಪಕ್ಕೆ ತಳ್ಳಿದೆ ಎಂದು ಕಣ್ಣೀರಿಟ್ಟರು ಆತನ ತಾಯಿ.