ನವದೆಹಲಿ: ವ್ಯಕ್ತಿಯೋರ್ವನಿಗೆ ಕೊರೊನಾ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಲು ರಾಷ್ಟ್ರ ರಾಜಧಾನಿಯ ಹಲವು ಆಸ್ಪತ್ರೆಗಳು ನಿರಾಕರಿಸಿದ್ದು, ಆತ ಭಾನುವಾರ ಕೊರೊನಾ ಸೋಂಕಿನಿಂದ ಸಾವಿಗೀಡಾಗಿದ್ದಾನೆ.
ಈ ಬಗ್ಗೆ ಆದಿತ್ಯ ಎಂಬ ಯುವಕ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದು, ದೆಹಲಿಯ ಹಲವು ಆಸ್ಪತ್ರೆಗಳು ನನ್ನ ತಂದಗೆ ಚಿಕಿತ್ಸೆ ನೀಡಲು ನಿರಾಕರಿಸಿದವು. ಹೀಗಾಗಿ ಅವರು ದೆಹಲಿಯಿಂದ 800 ಕಿ.ಮೀ. ದೂರದ ಭೋಪಾಲ್‌ಗೆ ಚಿಕಿತ್ಸೆಗೆಂದು ತೆರಳಬೇಕಾಯಿತು ಎಂದು ವಿವರಿಸಿದ್ದಾನೆ.
ನನ್ನ ತಂದೆ ಭೋಪಾಲ್ ತಲುಪಿದ ನಂತರ ಜೈಪ್ರಕಾಶ್ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪರೀಕ್ಷೆ ನಡೆಸಿದ ನಂತರ ಸೋಂಕು ಬಾಧಿಸಿರುವುದು ಪತ್ತೆಯಾಗಿತ್ತು. ಭಾನುವಾರ ಅವರು ಮಾರಣಾಂತಿಕ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಆತ ತಿಳಿಸಿದ್ದಾನೆ.
ರಕ್ತದಲ್ಲಿನ ಆಮ್ಲಜನಕದ ಸಾಂದ್ರತೆ ಕಡಿಮೆಯಾಗಿದೆ. ಇದರಿಂದಾಗಿ ಸೋಂಕಿನ ವಿರುದ್ಧ ಹೋರಾಡಲು ಅವರಿಗೆ ಸಾಧ್ಯವಾಗಲಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಹೀಗಿದ್ದರೂ ರೋಗಿಯನ್ನು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿಸಲಾಗಿದೆ ಎಂದು ಮಧ್ಯಪ್ರದೇಶ ಸರ್ಕಾರ ದೆಹಲಿ ಆಸ್ಪತ್ರೆಗಳ ನಡೆಯ ಕುರಿತಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಭೋಪಾಲ್‌ಗೆ ಬರುವ ಮುನ್ನವೇ ಈ ವ್ಯಕ್ತಿಯಲ್ಲಿ ಜ್ವರ ಕಾಣಿಸಿಕೊಂಡಿತ್ತು. ಆದ್ದರಿಂದ ದೆಹಲಿಯಿಂದ ಭೋಪಾಲ್‌ಗೆ ರೈಲು ಹತ್ತಿದ್ದಾಗ ನಿಲ್ದಾಣಗಳಲ್ಲಿ ಸರಿಯಾಗಿ ಸ್ಕ್ರೀನಿಂಗ್ ನಡೆಯುತ್ತಿಲ್ಲ ಎಂಬುದೂ ಕೂಡಾ ಈ ಪ್ರಕರಣದಿಂದ ಸ್ಪಷ್ಟವಾಗಿ ಗೋಚರವಾಗುತ್ತಿದೆ.