ನವದೆಹಲಿ: ಫೇಸ್‌ಬುಕ್ ಸೇರಿದಂತೆ 89 ಅಪ್ಲಿಕೇಷನ್‌ಗಳನ್ನು ಡಿಲೀಟ್ ಮಾಡುವಂತೆ ಭಾರತೀಯ ಸೇನೆಯು ತನ್ನ ಸಿಬ್ಬಂದಿಗೆ ಆದೇಶಿಸಿದೆ. ಸ್ವೀಡಿಷ್ ಕಾಲರ್ ಗುರುತಿನ ಅಪ್ಲಿಕೇಷನ್ ಟ್ರೂಕಾಲರ್ ಇದಕ್ಕೆ ಪ್ರತಿಕ್ರಿಯಿಸಿದ್ದು, ನಿಷೇಧಿತ ಆ್ಯಪ್ಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದು 'ತರವಲ್ಲ' ಮತ್ತು 'ಅನ್ಯಾಯ' ಎಂದು ಆಕ್ಷೇಪ ವ್ಯಕ್ತಪಡಿಸಿದೆ.
ಈ ಪಟ್ಟಿಯಲ್ಲಿ ಟಿಕ್‌ಟಾಕ್‌ನಂತಹ ಚೀನಿ ಅಪ್ಲಿಕೇಷನ್‌ಗಳು ಮಾತ್ರವಲ್ಲದೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಸ್ನ್ಯಾಪ್‌ಚಾಟ್, ಝೂಮ್ ಮತ್ತು ರೆಡ್ಡಿಟ್ನಂತಹ ಇತರೆ ಜನಪ್ರಿಯ ಆ್ಯಪ್ಗಳನ್ನು ಒಳಗೊಂಡಿದೆ. ರಾಷ್ಟ್ರೀಯ ಭದ್ರತಾ ವಿಷಯಗಳ ಮುಂದಿಟ್ಟು ಈ ಅಪ್ಲಿಕೇಷನ್‌ಗಳನ್ನು ಡಿಲೀಟ್ ಮಾಡಲು ಭಾರತೀಯ ಸೇನೆಯು ತನ್ನ ಸಿಬ್ಬಂದಿಗೆ ನಿರ್ದೇಶನ ನೀಡಿದೆ.
ಭಾರತೀಯ ಸಶಸ್ತ್ರ ಪಡೆಗಳು ತಮ್ಮ ಸಿಬ್ಬಂದಿಗೆ ನಿಷೇಧಿಸಿರುವ 89 ಅಪ್ಲಿಕೇಷನ್‌ಗಳ ಪಟ್ಟಿಯಲ್ಲಿ ಟ್ರೂಕಾಲರ್ ಕೂಡ ಇದೆ ಎಂದು ತಿಳಿದುಬಂದಿದ್ದು ನಿರಾಶಾದಾಯಕ ಮತ್ತು ದುಃಖಕರ ಸಂಗತಿಯಾಗಿದೆ. ಟ್ರೂಕಾಲರ್ ಎಂಬುದು ಸ್ವೀಡಿಷ್ ಮೂಲದ ಒಂದು ಅಪ್ಲಿಕೇಶನ್ ಆಗಿದ್ದು, ಅದು ಭಾರತವನ್ನು ತನ್ನ ಮನೆಯೆಂದು ಪರಿಗಣಿಸುತ್ತದೆ" ಎಂದು ಟ್ರೂಕಾಲರ್ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಟಾಕ್‌ಹೋಮ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಟ್ರೂಕಾಲರ್ ಕರೆ ಮಾಡುವವರ ಐಡಿ, ಸ್ಪ್ಯಾಮ್ ಪತ್ತೆ, ಸಂದೇಶ ಕಳುಹಿಸುವಿಕೆ ಮತ್ತು ಇತರೆ ಡಯಲರ್‌ನಂತಹ ಸೇವೆಗಳನ್ನು ಒದಗಿಸುತ್ತದೆ.
"ನಮ್ಮ ನಾಗರಿಕರಿಗೆ ಮತ್ತು ನಮ್ಮ ಗೌರವಾನ್ವಿತ ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಟ್ರೂಕಾಲರ್ ಸುರಕ್ಷಿತವಾಗಿ ಉಳಿದಿದೆ ಎಂದು ನಾವು ಪುನರುಚ್ಛರಿಸಲು ಬಯಸುತ್ತೇವೆ. ಟ್ರೂಕಾಲರ್ ಈ ಪಟ್ಟಿಯಲ್ಲಿರಲು ನಾವು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತೇವೆ ಎಂದಿದೆ.