ಚೆನ್ನೈ : ತಮಿಳುನಾಡಿನ ಪ್ರಸ್ತುತ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿಯವರೇ 2021ರ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ. ಪಕ್ಷದಲ್ಲಿ ಪಳನಿಸ್ವಾಮಿಯ ಪ್ರಬಲ ಪ್ರತಿಸ್ಪರ್ಧಿ ಹಾಗೂ ಸದ್ಯ ಉಪ ಮುಖ್ಯಮಂತ್ರಿಯಾಗಿರುವ ಓ. ಪನ್ನೀರಸೆಲ್ವಂ ಸ್ವತಃ ಈ ವಿಷಯವನ್ನು ಬುಧವಾರ ಖಚಿತಪಡಿಸಿದ್ದಾರೆ.
ಈ ಮೂಲಕ ಮುಖ್ಯಮಂತ್ರಿ ಅಭ್ಯರ್ಥಿ ಕುರಿತಾಗಿ ಪಕ್ಷದಲ್ಲಿದ್ದ ಹಗ್ಗ ಜಗ್ಗಾಟಕ್ಕೆ ಕೊನೆಗೂ ತೆರೆಬಿದ್ದಂತಾಗಿದೆ. ಮಂಗಳವಾರ ಇಡೀ ದಿನ ಹಾಗೂ ತಡರಾತ್ರಿಯವರೆಗೆ ಎರಡೂ ಬಣಗಳ ಮಧ್ಯೆ ನಡೆದ ಬಿರುಸಿನ ಮಾತುಕತೆಗಳ ನಂತರ ಸೌಹಾರ್ದಯುತ ಒಪ್ಪಂದ ಏರ್ಪಟ್ಟಿತು ಎಂದು ಹೇಳಲಾಗಿದೆ.
ಪನ್ನೀರಸೆಲ್ವಂ ಅವರು ಬಯಸಿದಂತೆ ತಮ್ಮ ಬಣದವರಿಗೆ ಎಐಎಡಿಎಂಕೆ ಪಕ್ಷದ ಸಂಚಾಲಕ ಮಂಡಳಿಯಲ್ಲಿ ಹೆಚ್ಚಿನ ಸ್ಥಾನ ನೀಡಬೇಕೆಂಬ ವಿಷಯವೇ ಬಹುದೊಡ್ಡ ಕಗ್ಗಂಟಾಗಿತ್ತು. ಆದರೂ ಈ ವಿಷಯ ಕೊನೆಗೂ ಸುಖಾಂತ್ಯಗೊಂಡಿದ್ದು, ಎಲ್ಲವೂ ಪೂರ್ವನಿಯೋಜಿತ ಎಂಬಂತೆ ಕಂಡು ಬರುತ್ತಿದೆ.
'2021ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಆತ್ಮೀಯ ಸಹೋದರ ಪಳನಿಸ್ವಾಮಿಯವರೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿರಲಿದ್ದಾರೆ. ಈ ಬಗ್ಗೆ ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ. ಪಕ್ಷದ ಆಡಳಿತ ಮಂಡಳಿಯ ಅಧ್ಯಕ್ಷ ಇ. ಮಧುಸೂದನ್ ಅವರು ಸಹ ಈ ನಿರ್ಧಾರ ಅನುಮೋದಿಸಿದ್ದಾರೆ' ಎಂದು ಪನ್ನೀರಸೆಲ್ವಂ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.
ಪಳನಿಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದ ಬೆನ್ನಲ್ಲೇ ಪತ್ರಿಕಾಗೋಷ್ಠಿ ನಡೆಯುತ್ತಿದ್ದ ಸ್ಥಳದ ಹೊರಗಡೆ ಜಮಾಯಿಸಿದ ಎಐಎಡಿಎಂಕೆ ಕಾರ್ಯಕರ್ತರು ಕಿವಿಗಡಚಿಕ್ಕುವಂತೆ ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.
ಎಐಎಡಿಎಂಕೆ ಪಕ್ಷದ ಉನ್ನತಾಧಿಕಾರದ ಸಂಚಾಲಕ ಮಂಡಳಿಗೆ ನೇಮಕ ಮಾಡಲಾದ 11 ಜನರ ಹೆಸರನ್ನು ಸಹ ಪನ್ನೀರಸೆಲ್ವಂ ಬಿಡುಗಡೆ ಮಾಡಿದರು. ಇದರಲ್ಲಿ 6 ಜನ ಪಳನಿಸ್ವಾಮಿ ಬಣದವರು ಹಾಗೂ ಇನ್ನುಳಿದ 5 ಜನ ಪನ್ನೀರಸೆಲ್ವಂ ಬಣಕ್ಕೆ ಸೇರಿದವರಾಗಿದ್ದಾರೆ. ಇದನ್ನು ನೋಡಿದ್ರೆ ಸಂಚಾಲಕ ಮಂಡಳಿಯಲ್ಲಿಯೂ ಪಳನಿಸ್ವಾಮಿ ಬಣವೇ ಮೇಲುಗೈ ಸಾಧಿಸಿದೆ. ಇನ್ನು ಮಂಡಳಿಯಲ್ಲಿ ಮಹಿಳೆಯರಿಗೆ ಹಾಗೂ ದಲಿತ ವರ್ಗದವರಿಗೆ ಯಾವುದೇ ಪ್ರಾತಿನಿಧ್ಯ ನೀಡಲಾಗಿಲ್ಲ.