ನವದೆಹಲಿ: ದೌಕಂಡಿ (ಬಾಂಗ್ಲಾದೇಶ) - ಸೋನಮುರಾ (ತ್ರಿಪುರ) ಒಳನಾಡಿನ ಜಲಮಾರ್ಗದ ಪ್ರಾಯೋಗಿಕ ಕಾರ್ಯಾಚರಣೆಯ ಆರಂಭದ ನಂತರ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸಂಬಂಧ ಮತ್ತೊಂದು ಮೈಲಿಗಲ್ಲು ತಲುಪಿದೆ.
ಸೆಪ್ಟೆಂಬರ್ 3ರಂದು ಬಾಂಗ್ಲಾದೇಶದ ಹಡಗು, ದೌಕಂಡಿಯಿಂದ ಪ್ರಯಾಣ ಪ್ರಾರಂಭಿಸಿ ಸೆಪ್ಟೆಂಬರ್ 5ರಂದು ಸೋನಮುರಾ ತಲುಪಲಿದೆ. ಈ ಹಡಗು ಗುಮ್ತಿ ನದಿಯ ಉದ್ದಕ್ಕೂ 93 ಕಿ.ಮೀ. ಪ್ರಯಾಣಿಸಲಿದೆ.
ಇದು ಒಳನಾಡಿನ ಜಲಮಾರ್ಗಗಳ ಮೂಲಕ ಬಾಂಗ್ಲಾದೇಶದಿಂದ ತ್ರಿಪುರಕ್ಕೆ ರಫ್ತು ಮಾಡುವ ಮೊದಲ ಸರಕು ಸಾಗಣ ಹಡಗಾಗಿದೆ. ತ್ರಿಪುರದ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ ಮತ್ತು ಬಾಂಗ್ಲಾದೇಶದ ಭಾರತದ ಹೈ ಕಮಿಷನರ್ ರಿವಾ ಗಂಗೂಲಿ ದಾಸ್ ಅವರ ಸಮ್ಮುಖದಲ್ಲಿ ಸೋನಮುರಾದಲ್ಲಿ ಸರಕು ಸ್ವೀಕರಿಸಲಿದ್ದಾರೆ.
ಈ ಹೊಸ ಮಾರ್ಗದ ಕಾರ್ಯಾಚರಣೆಯು ಬಾಂಗ್ಲಾದೇಶದೊಂದಿಗೆ ಒಟ್ಟಾರೆ ದ್ವಿಪಕ್ಷೀಯ ವ್ಯಾಪಾರವನ್ನು ಮತ್ತಷ್ಟು ಸುಗಮಗೊಳಿಸುವುದರ ಜೊತೆಗೆ ವೇಗವಾದ, ಸುರಕ್ಷಿತ ಮತ್ತು ಪರಿಸರ ಸ್ನೇಹಿ ಸಾರಿಗೆ ವಿಧಾನವನ್ನು ಒದಗಿಸುತ್ತದೆ ಮತ್ತು ಎರಡೂ ಕಡೆಗಳಲ್ಲಿ ಸ್ಥಳೀಯ ಸಮುದಾಯಗಳಿಗೆ ಸಾಕಷ್ಟು ಆರ್ಥಿಕ ಪ್ರಯೋಜನಗಳನ್ನು ನೀಡುತ್ತದೆ.
ಉಭಯ ದೇಶಗಳ ನಡುವೆ ವಿಶೇಷವಾಗಿ ಭಾರತದ ಈಶಾನ್ಯ ಪ್ರದೇಶದೊಂದಿಗೆ ಮತ್ತು ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸಲು ಒಳನಾಡಿನ ಜಲಮಾರ್ಗಗಳ ಸಂಪರ್ಕವನ್ನು ಒದಗಿಸಲು 1972ರಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವೆ ಒಳನಾಡಿನ ಜಲ ವ್ಯಾಪಾರ ಮತ್ತು ಸಾಗಣೆಗಾಗಿ (ಪಿಐಡಬ್ಲ್ಯೂಟಿಟಿ) ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.