ನಳಂದಾ(ಬಿಹಾರ್): ಬಿಹಾರ್ದ ನಳಂದಾ ಜಿಲ್ಲೆಯ ಬಿಂದ್ ಪೊಲೀಸ್ ಠಾಣಾ ವ್ಯಾಪ್ತಿಯ ಮಸೀಹಾಡಿಯಾ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಗರ್ಭಿಣಿ ಮಹಿಳೆ, ಆಕೆಯ ಪತಿ ಮತ್ತು ಹೆಣ್ಣು ಮಗುವನ್ನು ಕೊಂದು ಎಸೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದ್ರೆ, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಇನ್ನೂ ಖಚಿತವಾಗಿಲ್ಲ. ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಎಲ್ಲಾ ಮೃತದೇಹಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಮೃತರನ್ನು ಗರ್ಭಿಣಿ ಮಿಂತು ದೇವಿ, ಆಕೆಯ ಪತಿ ಸನ್ನಿ ಯಾದವ್ ಹಾಗೂ ಎರಡು ವರ್ಷದ ಮಗಳು ಎಂದು ಗುರುತಿಸಲಾಗಿದೆ. ಮಿಂತು ದೇವಿ ಕೆಲ ದಿನಗಳಿಂದ ತನ್ನ ಮಗಳೊಂದಿಗೆ ತವರು ಮನೆಯಲ್ಲಿ ವಾಸವಿದ್ದಳು. ಈಗ ಮಸೀಹಾಡಿಯಾ ಗ್ರಾಮಕ್ಕೆ ಮೂವರು ಬಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ಆದರೆ ಮೃತಳ ತಂದೆ ಇದು ಕೊಲೆ ಎಂದು ಆರೋಪಿಸಿದ್ದಾರೆ.
ಮೃತದೇಹಗಳ ಮೇಲೆ ಗಾಯಗಳ ಗುರುತುಗಳಿದ್ದು, ಮರಣೋತ್ತರ ವರದಿಯ ನಂತರವೇ ಈ ಪ್ರಕರಣ ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಖಚಿತವಾಗಲಿದೆ. ತನಿಖೆ ಮುಂದುವರೆದಿದೆ ಎಂದು ಬಿಂದ್ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.