ಭಾರತೀಯ ರೈಲ್ವೆ ತನ್ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಖಾಸಗಿ ಕಂಪನಿಗಳಿಗೆ ಬಾಗಿಲು ತೆರೆದಿದೆ. 109 ಮಾರ್ಗಗಳಲ್ಲಿ 151 ಆಧುನಿಕ ರೈಲುಗಳನ್ನು ಓಡಿಸಲು ಖಾಸಗಿ ಕಂಪನಿಗಳಿಗೆ ಆಹ್ವಾನ ನೀಡಿದೆ. ಇಂತಹ ಪ್ರಸ್ತಾವನೆ ಕೆಲ ಕಾಲದಿಂದ ಕೇಳಿ ಬರುತ್ತಲೇ ಇತ್ತು. ಈಗ ಹರಾಜು ಪ್ರಕ್ರಿಯೆ ಆರಂಭಿಸುವ ಮೂಲಕ ಖಾಸಗೀಕರಣಕ್ಕೆ ಮುನ್ನುಡಿ ಬರೆಯಲಾಗಿದೆ. ಹರಾಜು ಕೂಗುವವರಿಗೆ 6 ತಿಂಗಳ ಸಮಯಾವಕಾಶ ನೀಡಲಾಗಿದೆ. ಪ್ರಸ್ತುತ ಕೇಳಿ ಬರುತ್ತಿರುವ ದೊಡ್ಡ ಪ್ರಶ್ನೆ ಎಂದರೆ ರೈಲ್ವೆ, ಖಾಸಗಿ ಕಂಪನಿಗಳು ಹಾಗೂ ಜನಸಾಮಾನ್ಯರಿಗೆ ಇದರಿಂದ ಎಷ್ಟು ಪ್ರಯೋಜನ ಆಗುತ್ತದೆ ಎಂಬುದು.
ರೈಲ್ವೆಯ ಆಧುನೀಕರಣ ಮತ್ತು ವಿಸ್ತರಣೆ ಹೊಸ ವಿಷಯವೇನೂ ಅಲ್ಲ. ಈವರೆಗೆ ಹಲವಾರು ಸಮಿತಿಗಳು ಈ ಬಗ್ಗೆ ಕೆಲಸ ಮಾಡಿವೆ. ಆದರೂ, ವಿವೇಕ್ ದೇವ್ ರಾಯ್ ನೇತೃತ್ವದ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ 2015 ರಲ್ಲಿ ಬಿಡ್ಗಳನ್ನು ಆಹ್ವಾನಿಸಲಾಯಿತು. ಇದನ್ನು ಖಾಸಗೀಕರಣ ಎಂದು ಕರೆಯಬಾರದು, ಬದಲಿಗೆ ಉದಾರೀಕರಣ ಎನ್ನಬೇಕು ಎಂದು ಸಮಿತಿ ಸೂಚಿಸುತ್ತದೆ. ಇದು ಕೂಡ ನಿಜ, ಏಕೆಂದರೆ ಭಾರತೀಯ ರೈಲ್ವೆ ಒಟ್ಟು ಕಾರ್ಯಾಚರಣೆಯ ಶೇಕಡಾ 5 ರಷ್ಟು ಹಣವನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸಲು ಸಿದ್ಧತೆ ಮಾಡಿಕೊಂಡಿದೆ.
- ಮೊದಲ ಖಾಸಗಿ ರೈಲಿನ ಕಾರ್ಯಾಚರಣೆ - ಏಪ್ರಿಲ್ 2023
- ಅಂದಾಜು ಹೂಡಿಕೆ - 30,000 ಕೋಟಿ ರೂ.
- ಆಸಕ್ತ ಕಂಪನಿಗಳು - 20
ಏಕೆ ಈ ನಿರ್ಧಾರ ... ?
ಪ್ರಯಾಣಿಕರ ದೃಷ್ಟಿಯಿಂದ ದೊಡ್ಡ ನಗರಗಳ ನಡುವೆ ಹೆಚ್ಚಿನ ರೈಲುಗಳ ಸಂಚಾರದ ಅವಶ್ಯಕತೆ ಇನ್ನೂ ಇದೆ. ಸಾಮರ್ಥ್ಯದ ಕೊರತೆಯಿಂದಾಗಿ 5 ಕೋಟಿ ಪ್ರಯಾಣಿಕರಿಗೆ ರೈಲ್ವೆ ಪ್ರಯಾಣದ ಸೌಲಭ್ಯ ಕಲ್ಪಿಸಲು ಸಾಧ್ಯ ಆಗುತ್ತಿಲ್ಲ ಎಂದು ರೈಲ್ವೆ ಮಂಡಳಿ ಒಪ್ಪಿಕೊಂಡಿದೆ. ಬೇಸಿಗೆ ರಜೆ ಮತ್ತು ಹಬ್ಬದ ಸಮಯದಲ್ಲಿ ಈ ಬೇಡಿಕೆ ಇನ್ನಷ್ಟು ಹೆಚ್ಚುತ್ತದೆ. ರೈಲ್ವೆ ತನ್ನ ಮೂಲಸೌಕರ್ಯವನ್ನು ವಿಸ್ತರಿಸಲೇ ಬೇಕು. ಇಲ್ಲದೆ ಹೋದರೆ, ಮುಂದಿನ ಕೆಲವು ವರ್ಷಗಳಲ್ಲಿ ತನ್ನ ವ್ಯವಹಾರದ ಪಾಲನ್ನು ರಸ್ತೆ ಸಾರಿಗೆ ವಲಯಕ್ಕೆ ಬಿಟ್ಟುಕೊಡಬೇಕಾಗುತ್ತದೆ ಎಂಬ ಆತಂಕ ಇದೆ. ಇದಲ್ಲದೆ, ದೇವ್ ರಾಯ್ ಸಮಿತಿಯು ಸರ್ಕಾರದ ' ಮೇಕ್ ಇನ್ ಇಂಡಿಯಾ ' ನೀತಿಯನ್ನು ಮುನ್ನಡೆಸಬೇಕಾದ ಅಗತ್ಯವನ್ನು ಗುರುತಿಸಿದೆ. ಸರ್ಕಾರ. ಪ್ರಯಾಣದ ಗುಣಮಟ್ಟ ಸುಧಾರಿಸುತ್ತದೆ ಎಂದು ಖಾತ್ರಿಯಾದರೆ ಪ್ರಯಾಣಿಕರು ಹೆಚ್ಚಿನ ದರ ನೀಡಲು ಸಿದ್ಧರಿದ್ದಾರೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಅದಕ್ಕಾಗಿಯೇ ರೈಲುಗಳ ಕಾರ್ಯಾಚರಣೆಯಲ್ಲಿ ಖಾಸಗಿ ಹೂಡಿಕೆಗೆ ಉತ್ತೇಜನ ನೀಡಲಾಗುತ್ತಿದೆ.
ಇದು ಪ್ರಯಾಣಿಕರಿಗೆ ಒಳ್ಳೆಯದೆ ?
ಯಾವುದೇ ಕ್ಷೇತ್ರದಲ್ಲಿ ಏಕಸ್ವಾಮ್ಯ ಒಳ್ಳೆಯದಲ್ಲ. ಸ್ಪರ್ಧೆ ಇದ್ದರೆ ಉತ್ತಮ. ಆದರೆ, ಟಿಕೆಟ್ ದರ ನಿಗದಿಪಡಿಸುವಾಗ ತನ್ನ ಆದಾಯಕ್ಕೆ ಆದ್ಯತೆ ನೀಡುವುದಕ್ಕಿಂತ ಹೆಚ್ಚಾಗಿ ಭಾರತೀಯ ರೈಲ್ವೆ ಇದುವರೆಗೆ ಪ್ರಯಾಣಿಕರ ಕೈಗೆಟುಕುವಂತೆ ದರ ನಿಗದಿಪಡಿಸುತ್ತಿತ್ತು. ಸರಕು ಸಾಗಣೆ ಶುಲ್ಕಗಳ ಮೇಲೆ ಸ್ವಲ್ಪ ಹೆಚ್ಚು ಸುಂಕ ವಿಧಿಸುವ ಮೂಲಕ ಈ ಹೊರೆಯನ್ನು ಸರಿದೂಗಿಸಿಕೊಳ್ಳುತ್ತಿತ್ತು. ಈಗ ತನ್ನ ಖಾಸಗೀಕರಣದ ನಿರ್ಧಾರದೊಂದಿಗೆ ಪ್ರಯಾಣಿಕರಿಗೆ ಯಾವ ಲಾಭ ನೀಡಲು ಮುಂದಾಗಿದೆ ಎಂಬುದನ್ನು ಕಾದು ನೋಡಬೇಕಿದೆ. ಖಾಸಗಿ ಕಂಪನಿಗಳು ಭಾರತೀಯ ರೈಲ್ವೆಯಂತೆ ಯೋಚನೆ ಮಾಡದೆ ಲಾಭದತ್ತ ದೃಷ್ಟಿ ನೆಡಬಹುದು. ಒಂದು ವಿಷಯವಂತೂ ಸ್ಪಷ್ಟವಾಗಿದೆ; ಸೇವೆಯ ಗುಣಮಟ್ಟ ಸುಧಾರಣೆ ಆಗುವ ಸಾಧ್ಯತೆ ಇದೆ. ದರದಲ್ಲಿ ಸ್ವಲ್ಪಮಟ್ಟಿನ ಹೆಚ್ಚಳ ಉಂಟಾದರೆ ಅದರ ಕುರಿತು ಪ್ರಯಾಣಿಕರು ಚಿಂತೆ ಮಾಡಲಾರರು. ಪ್ರಸ್ತುತ, ಪ್ರಾಯೋಗಿಕ ಯೋಜನೆಯಂತೆ ಕಾಣುತ್ತಿರುವ ಈ ನಿರ್ಧಾರ ಯಶಸ್ವಿಯಾದರೆ, ಹೆಚ್ಚಿನ ಮಾರ್ಗಗಳಿಗೆ ಖಾಸಗಿ ಸಹಭಾಗಿತ್ವವನ್ನು ವಿಸ್ತರಣೆ ಮಾಡಬಹುದು.
ಅಖಾಡಕ್ಕೆ ಇಳಿಯಲಿರುವ ಕಂಪನಿಗಳು
ಮೊದಲ ಬಿಡ್ಡಿಂಗ್ ಪ್ರಕ್ರಿಯೆ ಪ್ರಕಾರ, ಸುಮಾರು ರೂ. 30,000 ಕೋಟಿ ಹೂಡಿಕೆಯನ್ನು ನಿರೀಕ್ಷೆ ಮಾಡಲಾಗಿದೆ. ತಲಾ 16 ಬೋಗಿಗಳಿರುವ 151 ರೈಲುಗಳನ್ನು ಓಡಿಸಲು ಸುಮಾರು 20 ಕಂಪನಿಗಳು ಆಸಕ್ತಿ ತೋರಿವೆ. ಅವುಗಳಲ್ಲಿ ಮುಖ್ಯವಾದವು, ಅದಾನಿ ಪೋರ್ಟ್, ಟಾಟಾ ರಿಯಾಲ್ಟಿ ಅಂಡ್ ಇನ್ಫ್ರಾ, ಎಸ್ಸೆಲ್ ಗ್ರೂಪ್, ಬೊಂಬಾರ್ಡಿಯರ್ ಇಂಡಿಯಾ, ಸೀಮೆನ್ಸ್ ಎ ಜಿ ಮತ್ತು ಮ್ಯಾಕ್ವಾರಿ ಗ್ರೂಪ್ ಇತ್ಯಾದಿ. ಅಲ್ಲದೆ ವಿಸ್ತಾರಾ, ಇಂಡಿಗೊ ಮತ್ತು ಸ್ಪೈಸ್ ಜೆಟ್‌ನಂತಹ ವಿಮಾನಯಾನ ಸಂಸ್ಥೆಗಳು ಕೂಡ ಹರಾಜಿನ ಕುರಿತು ಒಲವು ಇರಿಸಿಕೊಂಡಿವೆ.
ಅದಾನಿ ಬಂದರು : ಈ ಕಂಪನಿಗೆ ಪೂರ್ವಾನುಭವ ಇದೆ. ಇದು ಈಗಾಗಲೇ 300 ಕಿ. ಮೀ ಖಾಸಗಿ ರೈಲ್ವೆ ಮಾರ್ಗಗಳನ್ನು ಬಂದರುಗಳಿಗೆ ಸಂಪರ್ಕ ಕಲ್ಪಿಸುತ್ತದೆ. ದೊಡ್ಡ ಪ್ರಮಾಣದ ಮೂಲಸೌಕರ್ಯ ಯೋಜನೆಗಳನ್ನು ಕೈಗೊಳ್ಳುವಲ್ಲಿ ಇದು ಅನುಭವ ಪಡೆದಿದೆ. ಕಾರ್ಯಾಚರಣೆಯಲ್ಲಿರುವ ಮೆಟ್ರೋ ರೈಲು ಯೋಜನೆಗಳಲ್ಲಿ ಸಹ ಕಂಪೆನಿಯ ಪಾಲು ಇದೆ.
ಎಸ್ಸೆಲ್ ಗ್ರೂಪ್ : ಕಂಪನಿಯು ಹಲವಾರು ದಶಕಗಳಿಂದ ಸರ್ಕಾರದ ವಿವಿಧ ಮೂಲಸೌಕರ್ಯ ಯೋಜನೆಗಳನ್ನು ನಿರ್ವಹಿಸುತ್ತಿದೆ. ಎಸ್ಸೆಲ್ ತನ್ನ 'ಎಸ್ಸೆಲ್ ಇನ್ಫ್ರಾ ಪ್ರಾಜೆಕ್ಟ್ಸ್' ವಿಭಾಗದ ಮೂಲಕ 2018 ರಲ್ಲಿ ಮೊದಲ ರೈಲ್ವೆ ಯೋಜನೆಯನ್ನು ತನ್ನದಾಗಿಸಿಕೊಂಡಿತು.
ಟಾಟಾ ರಿಯಾಲ್ಟಿ ಮತ್ತು ಇನ್ಫ್ರಾ : ಪುಣೆಯಲ್ಲಿನ ಹಿಂಜೇವಾಡಿ- ಶಿವಾಜಿ ನಗರ ಮೆಟ್ರೋ ಯೋಜನೆ ಸಾಕಾರಗೊಳ್ಳಲು ಟಾಟಾ ಸಮೂಹದ ಈ ಅಂಗಸಂಸ್ಥೆ ಶ್ರಮಿಸಿದೆ. ದೆಹಲಿ- ಮೀರತ್ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯಲ್ಲಿ ಭೂಮ್ಯಂತರ್ಗತ ಮಾರ್ಗದ ನಿರ್ಮಾಣದಲ್ಲೂ ಇದು ಭಾಗಿಯಾಗಿತ್ತು.
ಬೊಂಬಾರ್ಡಿಯರ್ ಇಂಡಿಯಾ : ಜರ್ಮನ್ ಮೂಲದ ಈ ಕಂಪೆನಿ ಸಹ ಪ್ರಬಲ ಪ್ರತಿಸ್ಪರ್ಧಿಯಾಗಿದೆ. 50 ವರ್ಷಗಳ ಹಿಂದೆ ಭಾರತದಲ್ಲಿ ತನ್ನದೇ ಆದ ರೈಲು ವಾಹನ ಉತ್ಪಾದನಾ ಘಟಕವನ್ನು ಸ್ಥಾಪಿಸಿದ ಮೊದಲ ವಿದೇಶಿ ಬಹುರಾಷ್ಟ್ರೀಯ ಕಂಪನಿ ಇದು.
ಆಲ್ಸ್ಟೋಮ್: ಇದು ಫ್ರಾನ್ಸ್ ಮೂಲದ ವಿದೇಶಿ ಕಂಪನಿ. ಭಾರತದ ಹಲವಾರು ನಗರಗಳಲ್ಲಿ ಕಂಪೆನಿ ಮೆಟ್ರೋ ಯೋಜನೆಗಳನ್ನು ಕೈಗೆತ್ತಿಕೊಂಡಿದೆ.
ಹೆಚ್ಚುತ್ತಿರುವ ಷೇರುಗಳು
ಪ್ರಯಾಣಿಕರ ರೈಲುಗಳ ಕಾರ್ಯಾಚರಣೆಯನ್ನು ಖಾಸಗಿ ಕಂಪನಿಗಳಿಗೆ ವಹಿಸುವ ಯೋಜನೆ ಕುರಿತು ಭಾರತೀಯ ರೈಲ್ವೆ ಪ್ರಕಟಿಸುತ್ತಿದ್ದಂತೆ. ರೈಲುಗಳೊಂದಿಗೆ ನಂಟು ಇರುವ ಕಂಪನಿಗಳ ಷೇರು ವಹಿವಾಟಿನಲ್ಲಿ ಏರಿಕೆ ಕಂಡುಬಂದಿದೆ. ಉದಾಹರಣೆಗೆ ಐ ಆರ್ ಸಿ ಟಿ ಸಿ, ರೈಲ್ ವಿಕಾಸ್ ನಿಗಮ, ಇರ್ಕಾನ್ ಇಂಟರ್‌ನ್ಯಾಷನಲ್, ತೀತಾಘರ್ ವ್ಯಾಗನ್, ಟೆಕ್ಸ್ಮಾಕೊ ರೈಲು, ಸಿಮ್ಕೊ, ಸ್ಟೋನ್ ಇಂಡಿಯಾ ಮುಂತಾದ ಕಂಪನಿಗಳ ಷೇರುಗಳು ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಏರಿಕೆ ದಾಖಲಿಸಿವೆ.
ಖಾಸಗಿ ರೈಲು ಸಾರಿಗೆ ವ್ಯವಸ್ಥೆ ಇರುವ ಕೆಲವು ದೇಶಗಳು
ದೇಶ | ವರ್ಷ |
ಕೆನಡಾ | 1995 |
ಮೆಕ್ಸಿಕೊ | 2000 |
ಜಪಾನ್ | 1980 ರ ದಶಕದಲ್ಲಿ ಪ್ರಾರಂಭ |
ಅಮೆರಿಕಾದಲ್ಲಿ ಹಲವಾರು ಖಾಸಗಿ ಕಂಪನಿಗಳಿಗೆ ತಮ್ಮದೇ ಆದ ರೈಲು ಮಾರ್ಗಗಳಿವೆ. ಸ್ವಿಟ್ಜರ್‌ಲೆಂಡ್‌ನಲ್ಲಿ ರೈಲು ಸಾರಿಗೆ ಬಹುಪಾಲು ಖಾಸಗೀಕರಣಗೊಂಡಿದೆ. ಜರ್ಮನಿ ಸರಕು ಸಾಗಣೆ ಮತ್ತು ಅಲ್ಪಮಟ್ಟಿಗೆ ಪ್ರಯಾಣಿಕರ ಮಾರ್ಗಗಳನ್ನು ಖಾಸಗಿ ವಲಯಕ್ಕೆ ನಿಯೋಜಿಸಿದೆ. ಬ್ರಿಟನ್‌ನಲ್ಲಿ ಖಾಸಗಿ ರೈಲುಗಳ ಇತಿಹಾಸ ಬಹಳ ದೊಡ್ಡದಿದೆ. ಪ್ರಸ್ತುತ ರೈಲು ಸಾರಿಗೆಯನ್ನು ಸರ್ಕಾರದ ನಿಯಂತ್ರಣ ಮತ್ತು ಮೇಲ್ವಿಚಾರಣೆಯಲ್ಲಿ ಖಾಸಗಿ ವಲಯ ನಿರ್ವಹಿಸುತ್ತದೆ