ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಬೆಳ್ಳಂಬೆಳಗ್ಗೆ ನಡೆದಿರುವ ಅನಿಲ ಸೋರಿಕೆ ಪ್ರಕರಣವು 1984ರ ಭೋಪಾಲ್ ದುರಂತ ನೆನಪು ಮಾಡುವಂತಿದೆ.
ದೇಶವೇ ಮಹಾಮಾರಿ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ವಿಶಾಖಪಟ್ಟಣಂನ ಎಲ್ಜಿ ಪಾಲಿಮರ್ ರಾಸಾಯನಿಕ ಸ್ಥಾವರದಲ್ಲಿ ಅನಿಲ ಸೋರಿಕೆಯಿಂದಾಗಿ ನಡೆದಿರುವ ಮಹಾ ದುರ್ಘಟನೆಗೆ ದೇಶವೇ ಬೆಚ್ಚಿಬಿದ್ದಿದೆ.
ಘಟನೆಯಲ್ಲಿ ಈಗಾಗಲೇ 9 ಮಂದಿ ಸಾವನ್ನಪ್ಪಿದ್ದು, 200 ಮಂದಿಯ ಆರೋಗ್ಯ ಸ್ಥಿತಿಗತಿ ಗಂಭೀರವಾಗಿದೆ. ಉಳಿದಂತೆ 5 ಸಾವಿರಕ್ಕೂ ಹೆಚ್ಚು ಜನರು ವಿಷಗಾಳಿ ಸೇವಿಸಿ ಅಸ್ವಸ್ಥರಾಗಿದ್ದಾರೆ.
ಕಾರ್ಖಾನೆಯಲ್ಲಿ ಗ್ಯಾಸ್ ಸೋರಿಕೆಯಾಗುತ್ತಿದ್ದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕಾರ್ಖಾನೆಯ ಸುತ್ತಮತ್ತಲಿನ 5 ಕಿ.ಮೀ. ವ್ಯಾಪ್ತಿಯ 5 ಗ್ರಾಮಗಳನ್ನು ಸಂಪೂರ್ಣವಾಗಿ ಖಾಲಿ ಮಾಡಿಸಲಾಗಿದೆ.