ನವದೆಹಲಿ: ನಾಳೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಮಹತ್ವದ (CWC) ಸಭೆ ನಡೆಯಲಿದ್ದು, ಇದಕ್ಕೂ ಮುನ್ನ ಪಕ್ಷದ ಹಿರಿಯ ನಾಯಕರು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ನಾಯಕತ್ವ ವಿಚಾರವಾಗಿ ಪತ್ರ ಬರೆದಿದ್ದಾರೆ.
ಪಕ್ಷದಲ್ಲಿನ 'ಅನಿಶ್ಚಿತತೆ' ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೈ ಮುಖಂಡರು, ಸಂಸದರು, ಮಾಜಿ ಕೇಂದ್ರ ಸಚಿವರು ಪಕ್ಷದಲ್ಲಿ ಪೂರ್ಣಾವಧಿ ಹಾಗೂ ಪರಿಣಾಮಕಾರಿ ನಾಯಕತ್ವ, ಸುಧಾರಣೆಗಳ ಅಗತ್ಯವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ನ ಮಾಜಿ ಸಂಸದರೊಬ್ಬರು, "ಈ ಪತ್ರವು ಕಾಂಗ್ರೆಸ್ ಪಕ್ಷದ ಆಂತರಿಕ ವಿಷಯವಾಗಿದೆ. ವಿವರಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ನಾಳೆ ನಡೆಯುವ ಸಭೆಯಲ್ಲಿ ಚರ್ಚಿಸಲಾಗುವುದು" ಎಂದು ಹೇಳಿದ್ದಾರೆ.
ಗುಲಾಮ್ ನಬಿ ಆಜಾದ್, ಆನಂದ್ ಶರ್ಮಾ, ಕಪಿಲ್ ಸಿಬಲ್, ಶಶಿ ತರೂರ್, ಮನೀಶ್ ತಿವಾರಿ, ಎಂ.ವೀರಪ್ಪ ಮೊಯ್ಲಿ ಸೇರಿದಂತೆ ಪಕ್ಷದ 23 ನಾಯಕರು ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ನಾಳೆ ನಡೆಯುವ ಸಭೆಯಲ್ಲಿ ಹಂಗಾಮಿ ಅಧ್ಯಕ್ಷೆ ಸ್ಥಾನದಿಂದ ಸೋನಿಯಾ ಕೆಳಗಿಳಿಯುವ ಹಾಗೂ ನೂತನ ಸಾರಥಿಯನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬಂದಿವೆ.