ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ಆಧ್ಯಾತ್ಮಿಕ ನಗರ ವಾರಣಾಸಿ ಕ್ಷೇತ್ರದಿಂದ ಎರಡನೇ ಬಾರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದು, ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ.
ಉಮೇದುವಾರಿಕೆ ಸಲ್ಲಿಕೆಗೂ ಒಂದು ದಿನ ಮೊದಲೇ ಭರ್ಜರಿ ಶಕ್ತಿ ಪ್ರದರ್ಶನ ನಡೆಸಲು ಬಿಜೆಪಿ ನಿರ್ಧರಿಸಿದೆ. ಹೀಗಾಗಿ ವಾರಣಾಸಿಯಲ್ಲಿ ಇಂದು ಸಂಜೆ 3 ಗಂಟೆಗೆ ಪಕ್ಷದಿಂದ ಬೃಹತ್ ರ‍್ಯಾಲಿ ನಡೆಸಲಿದ್ದಾರೆ. ನಗರದಲ್ಲಿ 7 ಕಿಲೋ ಮೀಟರ್‌ನ ಈ ರ‍್ಯಾಲಿ ಬನಾರಸ್ ಹಿಂದೂ ಯುನಿವರ್ಸಿಟಿ ಯಿಂದ ಕಚಾರಿ ಚೌಕ್ ವರೆಗೆ ಸಾಗಲಿದೆ. ಈ ವೇಳೆ ಬನಾರಸ್ ಹಿಂದೂ ವಿಶ್ವ ವಿದ್ಯಾಲಯದ ಸಂಸ್ಥಾಪಕ ಮದನ್ ಮೋಹನ್ ಮಾಳವಿಯಾ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ.
ಪ್ರಧಾನಿ ಮೋದಿ ಗಂಗಾ ನದಿಗೆ ಸಾಗುವ ಮಾರ್ಗದ ಮುಖ್ಯ ದ್ವಾರವಾಗಿರೋ ದಶ ಅಶ್ವಮೇಧ ಘಾಟ್ ನಲ್ಲಿ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಇನ್ನು ಸಂಜೆ ಗಂಗಾ ಆರತಿ ಬೆಳಗಲಿದ್ದಾರೆ. ನಾಳೆ ನಾಮಪತ್ರ ಸಲ್ಲಿಕೆಗೂ ಮುನ್ನ ನಗರದಲ್ಲಿ ಅತಿ ಹಳೆಯದಾದ ಕಾಲಭೈರವ ದೇವಾಲಯಕ್ಕೆ ಭೇಟಿ ನೀಡಿ ಶಿವನ ಆಶೀರ್ವಾದ ಪಡೆಯಲಿದ್ದಾರೆ. ಈ ವೇಳೆ ಬಿಜೆಪಿಯ ಬಹುತೇಕ ನಾಯಕರು, ಎನ್‌ಡಿಎ ಅಂಗ ಪಕ್ಷಗಳ ನಾಯಕರು ಪ್ರಧಾನಿ ಸಾಥ್ ನೀಡಲಿದ್ದಾರೆ.