ತೂತುಕುಡಿ (ತಮಿಳುನಾಡು) : ತಂದೆ ಮತ್ತು ಮಗ ಜೈಲಿನಲ್ಲಿ ಸಾವನ್ನಪ್ಪಿದ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ. ಈ ಸಂಬಂಧ ಐವರು ಪೊಲೀಸರನ್ನು ತನಿಖೆಗೆ ಒಳಪಡಿಸಲಾಗಿದೆ ಎಂದು ಅಪರಾಧ ವಿಭಾಗದ ಸಿಐಡಿ ಇಂದು ತಿಳಿಸಿದ್ದಾರೆ.
ತೂತುಕುಡಿಯಲ್ಲಿ ಮೊಬೈಲ್ ಅಂಗಡಿಯೊಂದನ್ನು ನಡೆಸುತ್ತಿದ್ದ ಪಿ ಜಯರಾಜ್ ಮತ್ತು ಅವರ ಮಗ ಬೆನ್ನಿಕ್ಸ್ ಲಾಕ್ಡೌನ್ ವೇಳೆ ಅಂಗಡಿಯನ್ನು ತೆರೆದು ಸರ್ಕಾರದ ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ ಪೊಲೀಸರು, ಈ ಇಬ್ಬರನ್ನು ಜೂನ್ 19ರಂದು ಬಂಧಿಸಿದ್ದರು. ಈ ವೇಳೆ ಸಾಥಂಕುಲಂ ಪೊಲೀಸರ ಚಿತ್ರಹಿಂಸೆಯಿಂದಾಗಿ ಈ ಇಬ್ಬರು ಲಾಕಪ್‌ನಲ್ಲಿ ಜೂನ್ 21ರಂದು ಸಾವನ್ನಪ್ಪಿದ್ದರು ಎನ್ನಲಾಗಿದೆ.
ಈ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಸಿಬಿಐ-ಸಿಐಡಿಗೆ ವಹಿಸುವಂತೆ ಸರ್ಕಾರಕ್ಕೆ ಆದೇಶಿಸಿತ್ತು. ನ್ಯಾಯಾಲಯದ ಪ್ರಕಾರ ಸಿಬಿಐ ತನಿಖೆ ಕೈಗೊಂಡಿದ್ದು, ಈಗಾಗಲೇ ಐದು ಪೊಲೀಸರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.
ತಮಿಳುನಾಡು ಸರ್ಕಾರದ ಕೋರಿಕೆಯ ಮೇರೆಗೆ ಇಬ್ಬರು ವ್ಯಾಪಾರಿಗಳ ಲಾಕಪ್ ಡೆತ್ ಬಗ್ಗೆ ತನಿಖೆ ನಡೆಸಲು ಸಿಬಿಐಗೆ ವಹಿಸಲಾಗಿದೆ. ಆ ಪ್ರಕಾರ ತನಿಖೆ ಕೈಗೊಂಡಿದ್ದೇವೆ ಎಂದು ಸಿಬಿಐ ವಕ್ತಾರ ಆರ್ ಕೆ ಗೌರ್ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಇನ್ಸ್‌ಪೆಕ್ಟರ್ ಸೇರಿ ಐವರು ಪೊಲೀಸ್ ಸಿಬ್ಬಂದಿಯನ್ನು ಈವರೆಗೆ ಬಂಧಿಸಲಾಗಿದೆ.