ಆಂಧ್ರಪ್ರದೇಶ: ತಿರುಪತಿ, ಏಳುಮಲೆಗೊಡೆಯ ಮೇಲೆ ನೆಲೆಸಿರುವ ಆಂಧ್ರಪ್ರದೇಶದ ಜಗತ್ಪ್ರಸಿದ್ಧ ಆಧ್ಯಾತ್ಮಿಕ ನಗರ. ತಿಮ್ಮಪ್ಪನ ದರ್ಶನಕ್ಕೆ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಆದ್ರೂ ಕೂಡ ಪ್ಲಾಸ್ಟಿಕ್ ಪೆಡಂಭೂತ ಜೊತೆಗಿನ ಹೋರಾಟದಲ್ಲಿ ನಗರ ಗೆದ್ದಿದೆ. ಪ್ಲಾಸ್ಟಿಕ್ ಬಳಕೆ ನಗರದಲ್ಲಿ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ.
ಹೇಳಿಕೇಳಿ, ಆಸ್ತಿಕರಿಗೆ ತಿರುಪತಿ ದೇಶದ ಶ್ರೀಮಂತ ದೇವನಾದ ವೆಂಕಟರಮಣನಿರೋ ಪುಣ್ಯಸ್ಥಳ. ನಗರದ ಮೂರೂವರೆ ಲಕ್ಷ ಜನಸಂಖ್ಯೆಯ ಜೊತೆಗೆ ಲಕ್ಷಾಂತರ ಭಕ್ತರು ಪ್ರತಿದಿನ ತಿಮ್ಮಪ್ಪನ ದರ್ಶನಕ್ಕೆ ಬರ್ತಾರೆ. ನಿತ್ಯ ರಾಶಿರಾಶಿ ಕಸ, ಪ್ಲಾಸ್ಟಿಕ್ ವಸ್ತುಗಳು ಉತ್ಪತ್ತಿಯಾಗುತ್ತವೆ. ಇದನ್ನು ವಿಲೇವಾರಿ ಮಾಡೋದೇ ನಗರಸಭೆಗೆ ದೊಡ್ಡ ತಲೆನೋವಾಗಿತ್ತು. ಆದ್ರೆ ನಗರಸಭೆ ರೂಪಿಸಿದ ನೀತಿಯಿಂದ ತಿರುಪತಿ ಈಗ ಪ್ಲಾಸ್ಟಿಕ್ ಮುಕ್ತ ನಗರವಾಗಲು ಸಾಧ್ಯವಾಗಿದೆ.
2018, ಅಕ್ಟೋಬರ್ 2ರಂದು ತಿರುಪತಿ ನಗರಸಭೆಯು, ನಗರದಾದ್ಯಂತ ಪ್ಲಾಸ್ಟಿಕ್ ಬ್ಯಾಗ್ಗಳನ್ನು ನಿಷೇಧಿಸುವ ನಿರ್ಧಾರಕ್ಕೆ ಬಂತು. ಶಾಲೆ, ಕಾಲೇಜು ಸೇರಿದಂತೆ ವಿವಿಧ ಸಂಸ್ಥೆಗಳು ಪ್ಲಾಸ್ಟಿಕ್ ಪರಿಣಾಮಗಳ ಬಗ್ಗೆ ಕ್ಯಾಂಪೇನ್ಗಳನ್ನು ನಡೆಸಿ ಜನರಿಗೆ ಅರಿವು ಮೂಡಿಸಿದ್ರು. 'ಪ್ಲಾಸ್ಟಿಕ್ ಬಹಿಷ್ಕರಣ ಜಯಭೇರಿ' ಎಂಬ ಕಾರ್ಯಕ್ರಮದೊಂದಿಗೆ ವ್ಯಾಪಕ ಬದಲಾವಣೆಯೆಡೆಗೆ ನಗರ ತೆರೆದುಕೊಂಡಿತು. ಕಳೆದ ವರ್ಷದ ಅಕ್ಟೋಬರ್ ವೇಳೆಗೆ ಜನರು ತಮ್ಮ ತಮ್ಮ ಮನೆಗಳಲ್ಲಿರುವ ಪ್ಲಾಸ್ಟಿಕ್ ಚೀಲಗಳನ್ನು ಹೊರತಂದು ನಗರ ಸಭೆಯ ಮರುಬಳಕೆ ವಿಭಾಗಕ್ಕೆ ಹಸ್ತಾಂತರಿಸಿದ್ರು. ಅಲ್ಲಿಂದಲೇ ಶುರುವಾಯ್ತು ಬದಲಾವಣೆಯ ಮಹಾಪರ್ವ.
ಪ್ಲಾಸ್ಟಿಕ್ ಚೀಲಗಳು ನಿಷೇಧವೇನೋ ಆಯ್ತು. ಜನರೂ ಕೂಡಾ ಸ್ವಇಚ್ಛೆಯಿಂದ ಪ್ಲಾಸ್ಟಿಕ್ ಬಳಕೆಗೆ ಮಂಗಳ ಹಾಡಿದ್ರು. ಆದರೆ ಪ್ಲಾಸ್ಟಿಕ್ ಬ್ಯಾಗ್ಗಳಿಗೆ ಬದಲಿ ವ್ಯವಸ್ಥೆ ಆಗ್ಲೇಬೇಕಿತ್ತು. ಇದಕ್ಕಾಗಿ ನಗರಸಭೆ ಮತ್ತೊಂದು ಮಹತ್ವದ ನಿರ್ಧಾರಕ್ಕೆ ಬಂದಿತು. ಈ ಜವಾಬ್ದಾರಿಯನ್ನ ಮಹಿಳಾ ಸ್ವ-ಸಹಾಯ ಸಂಘಗಳಿಗೆ ವಹಿಸಲಾಯಿತು. ಇದರ ಸಕಾರಾತ್ಮಕ ಪರಿಣಾಮವೆಂಬಂತೆ ಪೇಪರ್ ಹಾಗೂ ಬಟ್ಟೆ ಚೀಲಗಳ ಉತ್ಪಾದನೆಯಾಯಿತು. ಈ ಪ್ರಯತ್ನದಿಂದಾಗಿಯೇ ಹಲವು ಮಹಿಳೆಯರು ಸಂಪಾದನೆಯಲ್ಲೂ ತೊಡಗುವಂತಾಯ್ತು.
ವಿಶೇಷವೆಂದರೆ, ಇಲ್ಲಿ ತಯಾರಾಗೋ ಈ ಪರಿಸರ ಸ್ನೇಹಿ ಚೀಲಗಳಲ್ಲೇ ಜಗತ್ಪ್ರಸಿದ್ಧ ತಿರುಪತಿ-ತಿರುಮಲ ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದ ವಿತರಿಸಲಾಗುತ್ತಿದೆ. ಇದಕ್ಕಾಗಿಯೇ ಈ ದೇಗುಲ ರಾಷ್ಟ್ರ ಮಟ್ಟದಲ್ಲಿ ಹಲವಾರು ಪುರಸ್ಕಾರಗಳನ್ನು ಪಡೆಯುತ್ತಿದೆ. ಬದಲಾವಣೆ ನಮ್ಮಲ್ಲಿಯೇ ಶುರುವಾಗಲಿ ಎಂಬ ಇರಾದೆಯೊಂದಿದ್ದರೆ, ಎಲ್ಲವೂ ಸಾಧ್ಯ. ಇಂತಹ ಪ್ರಯತ್ನಗಳು ಪ್ರತಿ ನಗರದಲ್ಲೂ ನಡೆದರೆ, ದೇಶ ಸ್ವಚ್ಛವಾಗುತ್ತದೆ.