ನವದೆಹಲಿ: ಬಿಜೆಪಿ ಸರ್ಕಾರ ನಕಲಿ ದಾಖಲೆ ಹಾಗೂ ನಕಲಿ ಘಟನೆಗಳನ್ನು ಮುಂದಿಟ್ಟುಕೊಂಡು ಇತಿಹಾಸ ತಿರುಚುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಡಾ. ಎಲ್ ಹನುಮಂತಯ್ಯ ಆಪಾದಿಸಿದರು.
ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಗ್ರಾಮಗಳ, ರೈಲ್ವೆ ನಿಲ್ದಾಣಗಳ, ಐತಿಹಾಸಿಕ ಸ್ಥಳಗಳ ಹೆಸರು ಬದಲಾಯಿಸಿದ ಮಾತ್ರಕ್ಕೆ ಇತಿಹಾಸಕ್ಕೆ ನ್ಯಾಯ ಸಲ್ಲಿಸಿದಂತೆ ಆಗುವುದಿಲ್ಲ. ಇತಿಹಾಸ ತಿರುಚುವುದು ಯಾರೂ ಎಂದಿಗೂ ಮಾಡಕೂಡದು ಎಂದರು.
ಟಿಪ್ಪು ಸುಲ್ತಾನ್ ಮೈಸೂರು ಸಾಮ್ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದಾಗ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದ. ತನ್ನ ಮಕ್ಕಳನ್ನು ಬ್ರಿಟಿಷರ ಬಳಿ ಒತ್ತೆಯಾಳಾಗಿ ಇರಿಸಿದ್ದ. ಟಿಪ್ಪು ಸಂಬಂಧಿಸಿದ ಇತಿಹಾಸ ತಿರುಚಿವ ಕೆಲಸ ರಾಜ್ಯದಲ್ಲಿ ನಡೆಯುತ್ತಿದ್ದು, ಇತಿಹಾಸ ತಿರುಚುವುದು ಬಿಜೆಪಿಯ ಹವ್ಯಾಸವಾಗಿದೆ ಎಂದರು.
ಬಿಜೆಪಿಯಿಂದ ಹೊರ ಬಂದ ಕೆಲವು ನಾಯಕರು ಟಿಪ್ಪು ಸ್ವಾತಂತ್ರ್ಯ ಹೋರಾಟದ ಅಪ್ರತಿಮ ನಾಯಕ. ಬ್ರಿಟಿಷರ ವಿರುದ್ಧ ಸೆಣಸಾಡಿದ್ದ ಭಾರತದ ಶ್ರೇಷ್ಠ ಪುತ್ರ ಎನ್ನುತ್ತಾರೆ. ಇನ್ನೊಂದು ಕಡೆ ಅವರನ್ನು ವಿರೋಧಿಸಿ ಅವರಿಗೆ ಸಂಬಂಧಿಸಿದ್ದ ಇತಿಹಾಸವನ್ನು ತಿರುಚುತ್ತಿದ್ದಾರೆ ಎಂದು ಆರೋಪಿಸಿದರು.
ಸಂಸತ್ತಿನ ವಿವಿಧ ಸಮಿತಿಗಳಲ್ಲಿ ಇದ್ದ ಕಾಂಗ್ರೆಸ್ನ ನಾಯಕರನ್ನು ಯಾವುದೇ ಸ್ಪಷ್ಟನೆ ಇಲ್ಲದೆ, ಒಂದೇ ಒಂದು ಕಾರಣವೂ ನೀಡದೆ ಏಕಾಏಕಿ ತೆಗೆದು ಹಾಕುತ್ತಿದ್ದಾರೆ. ಇದು ಯಾವತರಹದ ನ್ಯಾಯ ಎಂದು ಹನುಮಂತಯ್ಯ ಪ್ರಶ್ನಿಸಿದರು.