ಜೈಪುರ: ಪ್ರಪಂಚದಾದ್ಯಂತ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದ ಚೈನೀಸ್ ಟಿಕ್ಟಾಕ್ ಆ್ಯಪ್ನ್ನು ಸದ್ಯ ಭಾರತ ಸರ್ಕಾರ ನಿಷೇಧಿಸಿದೆ. ವಿಶ್ವದಾದ್ಯಂತ ಸುಮಾರು 800 ಮಿಲಿಯನ್ ಚಂದಾದಾರನ್ನು ಹೊಂದಿರುವ ಆ್ಯಪ್ ಪ್ರಸ್ತುತ ಸೈಬರ್ ಖದೀಮರಿಗೆ ಡೇಟಾ ಕಳ್ಳತನಕ್ಕೆ ರಾಜಮಾರ್ಗವಾಗಿದೆ.
ಭಾರತ ಸರ್ಕಾರ ಟಿಕ್ಟಾಕ್ ಸೇರಿದಂತೆ ಚೀನಾದ 58 ಆ್ಯಪ್ಗಳ ಬಳಕೆಯನ್ನು ನಿಷೇಧಿಸಿದೆ. ಆದ್ರೆ ಕೆಲ ಜನರು ಅಕ್ರಮವಾಗಿ ಮತ್ತೆ ಟಿಕ್ಟಾಕ್ ಅಪ್ಲಿಕೇಷನ್ ಪಡೆಯಲು ಮುಂದಾಗಿ ಸೈಬರ್ ಹ್ಯಾಕರ್ಗಳಿಗೆ ಬಲಿಯಾಗುತ್ತಿದ್ದಾರೆ.
ಟಿಕ್ಟಾಕ್ ಎಂಬ ಅಪ್ಲಿಕೇಷನ್ ಎಪಿಕೆ (apk) ಫಾರ್ಮೆಟ್ನಲ್ಲಿ ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಬಹುದಾದ ಒಂದು ಆ್ಯಪ್ ಆಗಿದ್ದು, ಸದ್ಯ ಇದೇ ನೆಪ ಇಟ್ಟುಕೊಂಡ ಸೈಬರ್ ಅಪರಾಧಿಗಳು ಟಿಕ್ಟಾಕ್ ಆ್ಯಪ್ ಪಡೆಯುವ ಕುರಿತ ಲಿಂಕ್ ಸಹಿತ ಸಂದೇಶ ರವಾನಿಸಿ ಬಳಕೆದಾರರನ್ನು ಬಲಿ ಪಶುಗಳನ್ನಾಗಿ ಮಾಡುತ್ತಿದ್ದಾರೆ.
ಸದ್ಯ ಟಿಕ್ಟಾಕ್ ಆ್ಯಪ್ ಮರಳಿ ಪಡೆಯುವ ಕುರಿತು ಸಂದೇಶವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದ್ರೆ ಟಿಕ್ಟಾಕ್ ಅಪ್ಲಿಕೇಷನ್ ಬರುವ ಬದಲಿಗೆ ಜಾಹೀರಾತು ಪ್ರದರ್ಶನಗೊಳ್ಳುತ್ತಿದೆ.
ಈ ಕುರಿತು ಈಟಿವಿ ಭಾರತ ಜನರನ್ನು ಜಾಗೃತಗೊಳಿಸುವ ಪ್ರಯತ್ನ ಮಾಡುತ್ತಿದ್ದು, ಲಿಂಕ್ ಬಳಸಿದರೆ ಮೊಬೈಲ್ನಲ್ಲಿರುವ ದೂರವಾಣಿ ಸಂಖ್ಯೆಗಳು ಸೈಬರ್ ಕಳ್ಳನ ಖಾತೆ ಸೇರುತ್ತವೆಯೇ ಹೊರತು ಟಿಕ್ಟಾಕ್ ಆ್ಯಪ್ ಸಿಗುವುದಿಲ್ಲ ಎಂಬ ಸತ್ಯವನ್ನು ಜನರಿಗೆ ತಿಳಿಸುತ್ತಿದೆ.
ಇಂತಹ ಸಂದೇಶಗಳು ಬಳಕೆದಾರರ ಸೆಲ್‌ಫೋನ್‌ನಿಂದ ಡೇಟಾವನ್ನು ಫಿಶಿಂಗ್ ಮಾಡಲು ಬಳಸಲಾಗುವ ಮಾಲ್‌ವೇರ್ ಲಿಂಕ್‌ಗಳಾಗಿರುವುದರಿಂದ ಜನರು ತಮ್ಮ ಡೇಟಾದ ಗೌಪ್ಯತೆ ಕಾಪಾಡಿಕೊಂಡಿರಬೇಕು ಎಂದು ತಜ್ಞರು ಹೇಳುತ್ತಾರೆ.
ಸದ್ಯ ಟಿಕ್ಟಾಕ್ ಪ್ರಿಯರನ್ನೇ ಮುಖ್ಯ ಗುರಿಯನ್ನಾಗಿಸಿಕೊಂಡಿರುವ ಹ್ಯಾಕರ್ಸ್ ಮಾಲ್ವೇರ ಬಳಸಿ ಗೌಪ್ಯ ಮಾಹಿತಿಯನ್ನು ಖದಿಯಲು ಮುಂದಾಗಿದ್ದು, ಜನರು ಇನ್ನಾದರೂ ಎಚ್ಚರಿಕೆಯಿಂದ ಇರಬೇಕಾಗಿದೆ.