ಗೋರಖ್‌ಪುರ (ಉ.ಪ್ರ): ಕೊರೊನಾ ಸೋಂಕಿತ ಮೂರು ತಿಂಗಳ ಮಗು ಗುಣಮುಖವಾಗಿದ್ದು, ಇಲ್ಲಿನ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.
"ಏಪ್ರಿಲ್ 12ರಂದು ಆಸ್ಪತ್ರೆಗೆ ಆಗಮಿಸಿದಾಗ ಮಗು ಮತ್ತು ತಾಯಿಯನ್ನು ಪರೀಕ್ಷಿಸಲಾಯಿತು. ತಾಯಿಯ ವರದಿ ನೆಗೆಟಿವ್ ಬಂದಿತ್ತು. ಆದರೆ ಮಗುವಿನ ವರದಿ ಪಾಸಿಟಿವ್ ಬಂದಿತ್ತು" ಎಂದು ಎಂದು ಬಾಬಾ ರಾಘವ್ ದಾಸ್ (ಬಿಆರ್ಡಿ) ವೈದ್ಯಕೀಯ ಕಾಲೇಜು ಪ್ರಾಂಶುಪಾಲರು ಡಾ ಗಣೇಶ್ ಕುಮಾರ್ ಹೇಳಿದ್ದಾರೆ.
"ಮಗುವನ್ನು ಗುಣಪಡಿಸುವುದು ಮಾತ್ರವಲ್ಲದೇ, ಸೋಂಕು ತಾಯಿಗೆ ಹರಡದಂತೆ ನೋಡಿಕೊಳ್ಳುವುದು ವೈದ್ಯರ ಮುಂದಿದ್ದ ಪ್ರಮುಖ ಸವಾಲಾಗಿತ್ತು" ಎಂದು ಅವರು ಹೇಳಿದರು.
"ತಾಯಿ ಮಗುವಿಗೆ ಹಾಲುಣಿಸುವಾಗ, ಮಾಸ್ಕ್ ಮತ್ತು ಗ್ಲೌಸ್ ಧರಿಸುವಂತೆ ಸೂಚನೆ ನೀಡಿದ್ದೆವು. ಆಕೆ ನಮ್ಮ ಸೂಚನೆಗಳನ್ನು ಅನುಸರಿಸುತ್ತಿದ್ದಳು" ಎಂದು ಕುಮಾರ್ ಹೇಳಿದರು.
ಇದೀಗ ಮಗು ಹಾಗೂ ತಾಯಿ ಇಬ್ಬರೂ ಆರೋಗ್ಯವಾಗಿದ್ದು, ಮನೆಯಲ್ಲಿ ಕೆಲವು ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲು ತಾಯಿಗೆ ಸೂಚಿಸಲಾಗಿದೆ.