ರಾಜಸ್ಥಾನ: ಅಕ್ಟೋಬರ್ 2ರಂದು ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಏಕ ಬಳಕೆಯ ಪ್ಲಾಸ್ಟಿಕ್‌ನಿಂದ ಮುಕ್ತಗೊಳಿಸುವಂತೆ ಕರೆ ನೀಡಿದ್ದರು. ಆದರೆ, ಇದಕ್ಕೂ ಮುನ್ನವೇ ರಾಜಸ್ಥಾನದ ಕೋಟಾ ಜಿಲ್ಲೆಯ ಕೇಶವ್‌ಪುರ ಗ್ರಾಮದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತಗೊಳಿಸುವ ಅಭಿಯಾನ ಪ್ರಾರಂಭವಾಗಿತ್ತು.
ಪ್ಲಾಸ್ಟಿಕ್ ಸೇವನೆಯಿಂದ ಹಲವಾರು ಸಾಕುಪ್ರಾಣಿಗಳು ಸತ್ತ ನಂತರ ಕೇಶವ್‌ಪುರ ಗ್ರಾಮದ ನಿವಾಸಿಗಳು ಜೈವಿಕ ವಿಘಟನೀಯ ವಸ್ತುವನ್ನು ಬಳಸದಿರಲು ನಿರ್ಧರಿಸಿದ್ದರು. ಜುಲೈ 11, 2019ರಂದು ಗ್ರಾಮಸ್ಥರು ಹಳ್ಳಿಯಾದ್ಯಂತ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ಬೆಂಕಿ ಹಚ್ಚುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದ್ರು. ಬಳಿಕ ಗ್ರಾಮಸ್ಥರು ಏಕ ಬಳಕೆಯ ಪ್ಲಾಸ್ಟಿಕನ್ನು ಮತ್ತೆ ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು.
ಗ್ರಾಮಸ್ಥರು ಕೈಗೊಂಡ ಈ ಸ್ವಯಂ ಪ್ರೇರಿತ ಕ್ರಮದಿಂದ ಪ್ರೇರಿತರಾಗಿ, ಕೇಶವ್‌ಪುರ ಗ್ರಾಮ ಅಭಿವೃದ್ಧಿ ಸಮಿತಿಯು ಏಕಬಳಕೆಯ ಪ್ಲಾಸ್ಟಿಕನ್ನು ಅಧಿಕೃತವಾಗಿ ನಿಷೇಧಿಸುವ ನಿರ್ಧಾರ ತೆಗೆದುಕೊಂಡಿತು. ಈ ನಿಷೇಧದ ಪರಿಣಾಮವಾಗಿ, ಜುಲೈನಿಂದ ಆಯೋಜಿಸಲಾದ 11 ಸಾಮೂಹಿಕ ಔತಣಕೂಟಗಳಲ್ಲಿ ಪ್ಲಾಸ್ಟಿಕ್ ಪ್ಲೇಟ್, ಗ್ಲಾಸ್ಗಳು ಮತ್ತು ಇತರೆ ಕೇಟರಿಗಳಂತಹ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಸಂಪೂರ್ಣ ನಿಲ್ಲಿಸಲಾಯ್ತು.
ಕೇಶವ್‌ಪುರದಾದ್ಯಂತ ಪ್ಲಾಸ್ಟಿಕ್ ಕಸದ ತೊಟ್ಟಿಗಳನ್ನೂ ಲೋಹದಿಂದ ಬದಲಾಯಿಸಲು ಗ್ರಾಮದ ಅಭಿವೃದ್ಧಿ ಸಮಿತಿ ನಿರ್ಧರಿಸಿದೆ. ಈ ಪುಟ್ಟ ಹಳ್ಳಿಯ ಪ್ರತಿ ನಿವಾಸಿಯೂ ಕೂಡಾ ಕಾಗದದ ಚೀಲ ಅಥವಾ ಬಟ್ಟೆಯ ಚೀಲವನ್ನೇ ಬಳಸುತ್ತಾರೆ. ರಾಜಸ್ಥಾನದ ರಾಜಧಾನಿ ಜೈಪುರದಿಂದ 40 ಕಿ.ಮೀ ದೂರದಲ್ಲಿರುವ ಮತ್ತು ಸುಮಾರು 600 ಜನಸಂಖ್ಯೆ ಹೊಂದಿರುವ ಕೇಶವ್‌ಪುರ ಈಗ ತನ್ನ ನೆರೆಹೊರೆಯ ಹಲವಾರು ಹಳ್ಳಿಗಳಿಗೆ ಇದೇ ರೀತಿಯ ಪರಿಸರ ಸ್ನೇಹಿ ಕ್ರಮಗಳನ್ನು ಕೈಗೊಳ್ಳಲು ಪ್ರೇರಣೆಯಾಗಿದೆ.