ಜೈಸಲ್ಮೇರ್(ರಾಜಸ್ಥಾನ) : ಕಾಂಗ್ರೆಸ್ ನೇತೃತ್ವದ ರಾಜಸ್ಥಾನ ಸರ್ಕಾರವನ್ನು ಉರುಳಿಸುವ ಪ್ರಯತ್ನದ ಆರೋಪ ಬಿಜೆಪಿ ವಿರುದ್ಧ ಕೇಳಿ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಇಂತಹ ಪ್ರಯತ್ನಗಳನ್ನು ಇಲ್ಲಿಗೆ ನಿಲ್ಲಿಸಬೇಕು ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಒತ್ತಾಯಿಸಿದ್ದಾರೆ.
ತಮಗೆ ಬೆಂಬಲವಾಗಿ ನಿಂತಿರುವ 100 ಮಂದಿ ಶಾಸಕರನ್ನು ಜೈಸಲ್ಮೇರ್‌ನ ಹೋಟೆಲ್‌ವೊಂದರಲ್ಲಿ ಇರಿಸಿದ್ದು, ಇಂದು ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮಾಜಿ ಡಿಸಿಎಂ ಸಚಿನ್ ಪೈಲಟ್ ನೇತೃತ್ವದ ಅತೃಪ್ತ ಶಾಸಕರು ವಾಪಸ್ ಬಂದರೆ ಸ್ವಾಗತಿಸುವುದಾಗಿ ತಿಳಿಸಿದ್ದಾರೆ.
ನರೇಂದ್ರ ಮೋದಿ ಅವರು ದೇಶದ ಪ್ರಧಾನಮಂತ್ರಿಯಾಗಿದ್ದಾರೆ. ದೇಶವನ್ನು ಮುನ್ನಡೆಸುವಂತೆ ಅವರಿಗೆ ಜನ 2 ಬಾರಿ ಅವಕಾಶ ನೀಡಿದ್ದಾರೆ. ಪ್ರಧಾನಿ ಜನರಿಂದ ಚಪ್ಪಾಳೆ ತಟ್ಟಿಸಿದ್ದಾರೆ. ಪಾತ್ರೆಗಳನ್ನು ತಟ್ಟಿಸಿದ್ದಾರೆ. ಜನ ಅವರನ್ನು ನಂಬಿದ್ದಾರೆ. ಇದು ದೊಡ್ಡ ವಿಚಾರ. ಆದರೆ, ಈ ತಮಾಷಾ(ಡ್ರಾಮಾ)ವನ್ನು ಇಲ್ಲಿಗೆ ಅಂತ್ಯಗೊಳಿಸಬೇಕು ಎಂದಿದ್ದಾರೆ. ಅಧಿವೇಶನ ಆರಂಭವಾಗುವುದಕ್ಕೂ ಮುನ್ನ ಕುದುರೆ ವ್ಯಾಪಾರದ ಬೆಲೆಯನ್ನು ಹೆಚ್ಚಿಸಿದ್ದಾರೆ. ಇದೆಲ್ಲಾ ಏನು ಡ್ರಾಮಾ ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಡಿಸಿಎಂ ಆಗಿದ್ದ ಸಚಿನ್ ಪೈಲಟ್ ಬಣದ 18 ಶಾಕರು ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿದ್ದರು. ಅಂದಿನಿಂದ ರಾಜಕೀಯ ಬಿಕ್ಕಟ್ಟು ಮುಂದುವರಿದಿದ್ದು, ಪ್ರತಿಭಟನೆ, ಆರೋಪ, ಪ್ರತ್ಯಾರೋಪಗಳ ಬಳಿಕ ರಾಜ್ಯಪಾಲ ಕಾಲರಾಜ್ ಮಿಶ್ರಾ ಅಗಸ್ಟ್ 14ರಂದು ವಿಧಾನಸಭೆ ಕಲಾಪಕ್ಕೆ ಅನುಮತಿ ನೀಡಿದ್ದು, ಅಂದು ಸಿಎಂ ಗೆಹ್ಲೋಟ್ ಬಹುಮತ ಸಾಬೀತು ಮಾಡಬೇಕಿದೆ.