ನಾಗೌರ್(ರಾಜಸ್ಥಾನ): ಪ್ರೇಮ ವಿವಾಹವಾಗಿದ್ದ ದಂಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ನಾಗೌರ್ ಜಿಲ್ಲೆಯ ಖಿವಾನ್ಸರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದಂಪತಿ ಅಸೋಪ್ ಪೊಲೀಸ್ ಠಾಣಾ ಪ್ರದೇಶದ ನಿವಾಸಿಗಳು. ಖಿವಾನ್ಸಾರ್ ಪೊಲೀಸ್ ಠಾಣೆಯ ಮಾಹಿತಿ ಪ್ರಕಾರ, ಸುಮಾರು ಒಂದು ವರ್ಷದಿಂದ ಇಬ್ಬರೂ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಘಟನೆಯ ಹಿನ್ನೆಲೆ: ಇಬ್ಬರೂ ಫೋನ್ ಕರೆ ಮೂಲಕ ಮಾತನಾಡಿಕೊಂಡು ಬೆಳಗಿನ ಜಾವ ತಮ್ಮ ಗ್ರಾಮದಿಂದ ಬೈಕ್‌ನಲ್ಲಿ ಖಿವಾನ್ಸಾರ್ ಪೊಲೀಸ್ ಠಾಣಾ ಪ್ರದೇಶದ ಭಕ್ರೋಡ್ ಶೀಲ್ಗಾಂವ್ ರಸ್ತೆಗೆ ಬಂದಿದ್ದಾರೆ. ನಂತರ ಇಬ್ಬರೂ ವಿಷಕಾರಿ ಪದಾರ್ಥವನ್ನು ಸೇವಿಸಿ ಸಾವಿಗೆ ಯತ್ನಿಸಿದ್ದಾರೆ. ಹೀಗೆ ವಿಷಸೇವಿಸಿ ಬಿದ್ದಿದ್ದವರನ್ನು ಕಂಡ ಯಾರೋ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಅವರನ್ನು ಆ್ಯಂಬುಲೆನ್ಸ್ ಮೂಲಕ ಭಕ್ರೋಡ್ ಆಸ್ಪತ್ರೆಗೆ ಸಾಗಿಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮಹಿಳೆ ಸಾವನ್ನಪ್ಪಿದ್ದು, ಯುವಕನನ್ನು ಅನಾರೋಗ್ಯದ ಕಾರಣ ನಾಗೌರ್‌ನ ಜವಾಹರಲಾಲ್ ನೆಹರು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತನೂ ಮೃತಪಟ್ಟಿದ್ದಾನೆ.
ಖಿವಾನ್ಸರ್ ಪೊಲೀಸ್ ಅಧಿಕಾರಿ ಬ್ರಿಜೇಂದ್ರ ಸಿಂಗ್ ಮಾಯಾ ಗುಪ್ತಾ ಭಕ್ರೋಡ್ ಆಸ್ಪತ್ರೆಗೆ ತಲುಪಿ ಇಬ್ಬರನ್ನೂ ಬೈಕ್ ದಾಖಲೆಗಳ ಮೂಲಕ ಗುರುತಿಸಿದ್ದಾರೆ. ವಿಷಕಾರಿ ವಸ್ತುವಿನ ಬಾಟಲಿಯನ್ನು ಪೊಲೀಸರು ಪತ್ತೆ ಮಾಡಿದ್ದು, ತನಿಖೆ ಮುಂದುವರೆಸಿದ್ದಾರೆ.