ನವದೆಹಲಿ: ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಜಕೀಯ ನಾಯಕರು ನೀತಿ ಸಂಹಿತೆ ಉಲ್ಲಂಘನೆ ಮಾಡುತ್ತಿದ್ದರೂ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಭಾರತೀಯ ಚುನಾವಣಾ ಆಯೋಗದ ಮಾಜಿ ಆಯುಕ್ತ ಡಾ.ಎಸ್.ವೈ.ಖುರೇಷಿ ಅವರು ಟೀಕಿಸಿ ಬರೆದಿದ್ದ ಪತ್ರಕ್ಕೆ ಆಯೋಗ ತರಾಟೆ ತೆಗೆದುಕೊಂಡಿದೆ.
ಉಪ ಚುನಾವಣಾ ಆಯುಕ್ತ ಸಂದೀಪ್ ಸಕ್ಸೇನಾ ಅವರು ಖುರೇಷಿ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ್ದು, ನಿಮ್ಮ (ಖುರೇಷಿ ಚುನಾವಣಾ ಆಯುಕ್ತರಾಗಿದ್ದ ಸಂದರ್ಭ) ಅಧಿಕಾರದ ಅವಧಿಯಲ್ಲಿಯೂ ಸಹ ನೀತಿ ಸಂಹಿತೆ ಉಲ್ಲಂಘಿಸಿದವರ ವಿರುದ್ಧ ಜನಪ್ರತಿನಿಧಿ ಕಾಯ್ದೆಯನ್ವಯ ಕಾನೂನು ಕ್ರಮ ಕೈಗೊಳ್ಳುತ್ತಿರಲಿಲ್ಲ. ಈಗ ನೀವು ಟೀಕೆ ಮಾಡುವುದು ಸರಿಯಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳದೆ, ಯಾರೊಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳದೆ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದ ನೀವು 9 ಬಾರಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದೀರಾ? 5 ಸಲ ಎಚ್ಚರಿಕೆ ಮತ್ತು ಎರಡು ಬಾರಿ ನಿರ್ದೇಶನ ಕೊಟ್ಟಿದ್ದೀರಾ? ಎಂದು ಸಕ್ಸೇನಾ ಅವರು ಆಧಾರಸಹಿತವಾಗಿ ಉಲ್ಲೇಖಿಸಿದ್ದಾರೆ.
ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಐಪಿಸಿ ಸೆಕ್ಷನ್ 123 ಮತ್ತು 125 ಕಾಯ್ದೆಯಡಿ ದೆಹಲಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರು. ಆದರೂ ಆತನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಿಲ್ಲ. ಪ್ರಕರಣವೂ (ಎಫ್ಐಆರ್) ದಾಖಲಿಸಲಿಲ್ಲ ಏಕೆ ಎಂದು ಪ್ರಶ್ನಿಸಿ ಆಯೋಗಕ್ಕೆ ಖುರೇಷಿ ಪತ್ರ ಬರೆದಿದ್ದರು.
ಕಳೆದ 20 ವರ್ಷಗಳಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಡಿ ಕ್ರಮಕ್ಕೆ ಒಳಗಾದವರ ಪಟ್ಟಿಯನ್ನು ಖುರೇಷಿಗೆ ಬರೆದ ಪತ್ರದಲ್ಲಿ ಸಕ್ಸೇನಾ ಅವರು ಲಗತ್ತಿಸಿದ್ದಾರೆ.