ಕಾಂಚೀಪುರಂ (ತಮಿಳುನಾಡು) : ಕಾಂಚೀಪುರಂನ ಪ್ರಸಿದ್ಧ ವರದರಾಜ ಪೆರುಮಾಳದಲ್ಲಿ ಸ್ತೋತ್ರಗೀತೆಗಳನ್ನು ಹಾಡುವುದರ ಬಗ್ಗೆ ವೈಷ್ಣವ ಪಂಗಡಗಳಾದ ತೆಂಕಲೈ ಮತ್ತು ವಡಕಲೈ ಸಮುದಾಯದ ನಡುವೆ ಭಾರೀ ಜಗಳ ನಡೆದಿದೆ.
ಕಾಂಚೀಪುರಂನಲ್ಲಿನ ಈ ಘಟನೆ ಹಿನ್ನೆಲೆ ಉದ್ವಿಗ್ನತೆ ಉಂಟಾಗಿದೆ. ವೈಷ್ಣವ ಸಮುದಾಯದ ಉಪ-ಪಂಗಡಗಳಾದ ವಡಕಲೈ ಮತ್ತು ತೆಂಕಲೈ ಸಮುದಾಯದರು ವರದರಾಜ ಪೆರುಮಾಳ್ ದೇವಸ್ಥಾನದಲ್ಲಿ ದೇವರ ಮುಂದೆ ಸ್ತುತಿ ಗೀತೆಗಳನ್ನು ಜಪಿಸುವುದರ ಬಗ್ಗೆ ತೀವ್ರ ವಾದ-ವಿವಾದ ನಡೆಸಿದ್ದಾರೆ.
ಈ ವಾದ ತಾರಕ್ಕಕ್ಕೇರಿದ ಕಾರಣ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ. ಈ ಹಿಂದೆ ಕೂಡ ಈ ಎರಡು ಪಂಗಡದವರು ಜಗಳ ಮಾಡಿಕೊಂಡಿದ್ದರಂತೆ. ವರದರಾಜ ಪೆರುಮಾಳ್ ದೇವಸ್ಥಾನದಲ್ಲಿ ಹಲವಾರು ಭಕ್ತರ ಸಮ್ಮುಖದಲ್ಲಿ ಇದೇ ರೀತಿಯ ವಿವಾದ ಭುಗಿಲೆದ್ದಿತ್ತಂತೆ. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ಕೂಡ ಇದ್ದು, ಈ ನಡುವೆಯೇ ಮತ್ತೆ ಘರ್ಷಣೆ ಮುಂದುವರೆಸಿದ್ದಾರೆ.
ತೆಂಕಲೈ ಮತ್ತು ವಡಕಲೈ ಅಯ್ಯಂಗಾರ್ ಸಮುದಾಯದ ಪಂಗಡಗಳಾಗಿವೆ. ಇವರು ವಿಷ್ಣುವಿನ ಆರಾಧನೆಗೆ ಹೆಸರುವಾಸಿಯಾಗಿದ್ದಾರೆ. ಎರಡು ಪಂಥಗಳ ನಡುವಿನ ಪ್ರಮುಖ ವ್ಯತ್ಯಾಸವೆಂದ್ರೆ ಅವರ ಪ್ರಾರ್ಥನಾ ಪುಸ್ತಕ. ತೆಂಕಲೈ ಪಂಥವು ತಮಿಳು ಮೂಲದ ಸಂಪ್ರದಾಯಗಳ ಮೇಲೆ ಕೇಂದ್ರೀಕರಿಸಿದ್ರೆ, ವಡಕಲೈಗಳು ಸಂಸ್ಕೃತ ಸಂಬಂಧಿತ ಸಂಪ್ರದಾಯಗಳನ್ನು ನಂಬುತ್ತಾರೆ. ಇದೇ ಕಾರಣಕ್ಕೆ ಈಗಲೂ ಇವರಿಬ್ಬರ ನಡುವೆ ಘರ್ಷಣೆಗಳು ನಡೆಯುತ್ತಾ ಬರುತ್ತಿವೆ ಎನ್ನಲಾಗಿದೆ.