ಪಶ್ಚಿಮ ಬಂಗಾಳ: ಶಂಕಿತ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದರು ಎನ್ನಲಾದ ವಿದೇಶಿ ಮಹಿಳೆಯೊಬ್ಬರು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮೃತಪಟ್ಟಿದ್ದಾರೆ.
ಕೊರೊನಾ ವೈರಸ್ ಹೋಲುವ ಲಕ್ಷಣಗಳಾದ ಹೊಟ್ಟೆ ನೋವು, ವಾಕರಿಕೆ ಹಾಗೂ ಜ್ವರದಿಂದ ಬಳಲುತ್ತಿದ್ದ ಥೈಲ್ಯಾಂಡ್ ಮೂಲದ 32 ವರ್ಷ ವಯಸ್ಸಿನ ಮಹಿಳೆಯೊಬ್ಬರು ಜನವರಿ 21ರಂದು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಇನ್ನು ಇವರ ಸಾವಿನ ಸಂಬಂಧ ಥಾಯ್ ಕಾನ್ಸುಲೇಟ್ ಜನರಲ್ಗೆ ಮಾಹಿತಿ ನೀಡಲಾಗಿದ್ದು, ಮೃತಳ ಎಲ್ಲಾ ರೀತಿಯ ವೈದ್ಯಕೀಯ ಪರೀಕ್ಷೆಗಳ ವರದಿಯನ್ನು ನೀಡುವಂತೆ ಪಶ್ಚಿಮ ಬಂಗಾಳ ಆರೋಗ್ಯ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಗೆ ಸೂಚಿಸಿದ್ದಾರೆ.
ಈ ಮಹಿಳೆ ನವೆಂಬರ್ ತಿಂಗಳಲ್ಲೇ ಥೈಲ್ಯಾಂಡ್ನಿಂದ ಹೊರಟು ಪ್ರವಾಸ ಕೈಗೊಂಡಿದ್ದು, ಭಾರತಕ್ಕೆ ಬರುವ ಮೊದಲು ನೇಪಾಳಕ್ಕೆ ಭೇಟಿ ನೀಡಿರುವುದು ತಿಳಿದು ಬಂದಿದೆ. ಚೀನಾದ ವುಹಾನ್ ನಗರದಲ್ಲಿ ಮೊದಲು ಕೊರೊನಾ ವೈರಸ್ ಪತ್ತೆಯಾಗಿದ್ದು, ಚೀನಾದಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ. ಏಷ್ಯಾದ ಇತರ ರಾಷ್ಟ್ರಗಳಿಗೂ ಸೋಂಕು ಹರಡಿದೆ. ಥೈಲ್ಯಾಂಡ್ನಲ್ಲಿ ಈಗಾಗಲೇ 8 ಮಂದಿ ಕೊರೊನಾ ವೈರಸ್ಗೆ ಬಲಿಯಾಗಿರುವುದಾಗಿ ವರದಿಯಾಗಿದೆ.