ಶ್ರೀನಗರ: ಜಂಟಿ ಕಾರ್ಯಾಚರಣೆಯಲ್ಲಿದ್ದ ಸಿಆರ್ಪಿಎಫ್ ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಓರ್ವ ಸಿಆರ್ಪಿಎಫ್ ಯೋಧ ಗಾಯಗೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಗಂಗೂ ಪ್ರದೇಶದಲ್ಲಿ ಘಟನೆ ನಡೆದಿದ್ದು, ಗಾಯಾಳು ಯೋಧನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಿನ್ನೆ ಪುಲ್ವಾಮಾದ ಟ್ರಾಲ್ ಪಟ್ಟಣದಲ್ಲಿ ಉಗ್ರರು ಗ್ರೆನೇಡ್ ಎಸೆದಿದ್ದು, ಸಿಆರ್‌ಪಿಎಫ್‌ನ ಸಹಾಯಕ ಸಬ್‌ಇನ್ಸ್‌ಪೆಕ್ಟರ್ ಗಾಯಗೊಂಡಿದ್ದರು. ಅಕ್ಟೋಬರ್ 5ರಂದು ಶ್ರೀನಗರದ ಪಾಂಪೋರ್ನಲ್ಲಿ ಉಗ್ರರ ದಾಳಿಗೆ ಇಬ್ಬರು ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದು, ಮೂವರು ಗಾಯಗೊಂಡಿದ್ದರು.
ಹಿರಿಯ ಸೇನಾ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಸುಮಾರು 200 ಉಗ್ರರು ಕಾಶ್ಮೀರದಲ್ಲಿ ಆಕ್ಟೀವ್ ಇದ್ದು, ಇವರಲ್ಲಿ ಬಹುತೇಕರು ಪಾಕಿಸ್ತಾನ ಮೂಲದವರಾಗಿದ್ದಾರೆ.