ಶ್ರೀನಗರ (ಜಮ್ಮು-ಕಾಶ್ಮೀರ): ಭದ್ರತಾ ಪಡೆಗಳು ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಅಡಗುದಾಣವೊಂದನ್ನು ಭೇದಿಸಿ ಸ್ಫೋಟಕಗಳು, ಸ್ವಯಂಚಾಲಿತ ರೈಫಲ್‌ಗಳು ಮತ್ತು ಪಿಸ್ತೂಲ್‌ಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ 38ನೇ ರಾಷ್ಟ್ರೀಯ ರೈಫಲ್ನ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದ್ದು, ಗಂಭೀರ್ ಮುಘಲನ್ ಬಳಿಯ ಅರಣ್ಯ ಪ್ರದೇಶದಲ್ಲಿ ಅಡಗುದಾಣವನ್ನು ಪತ್ತೆ ಹಚ್ಚಿದ್ದಾರೆ.
ಈ ಅಡಗುದಾಣವನ್ನು ಕಲ್ಲುಗಳಿಂದ ನಿರ್ಮಿಸಲಾಗಿದೆ ಎಂದು ರಜೌರಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಚಂದನ್ ಕೊಹ್ಲಿ ತಿಳಿಸಿದ್ದು, ಎರಡು ಎಕೆ-47, ಎರಡು ಮ್ಯಾಗಜೀನ್ಗಳು, 270 ಗುಂಡುಗಳು, ಎರಡು ಚೀನಿ ನಿರ್ಮಿತ ಪಿಸ್ತೂಲ್‌ಗಳು, 75 ಪಿಕಾ ಗುಂಡುಗಳು, 10 ಡಿಟೋನೇಟರ್ಗಳು ಹಾಗೂ ಐದರಿಂದ ಆರು ಕಿಲೋ ಗ್ರಾಂನಷ್ಟು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈಗಲೂ ಉಗ್ರರಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು, ಮಂಜಕೋಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲವು ದಿನಗಳ ಹಿಂದಷ್ಟೇ ಪೂಂಚ್ ಜಿಲ್ಲೆಯ ಮೆಂದಾರ್ ತೆಹಸಿಲ್ ಬಳಿಯ ಕಾಲಾಬನ್ ಅರಣ್ಯ ಪ್ರದೇಶದಲ್ಲಿ ಅಡುಗುದಾಣವೊಂದು ಪತ್ತೆಯಾಗಿದ್ದು, ಒಂದು ಎಕೆ-56, ಮೂರು ಮ್ಯಾಗಜೀನ್, ಎರಡು ಬೈನಾಕ್ಯುಲರ್ಗಳು, ಒಂದು ರೇಡಿಯೋ ಸೆಟ್, ಸೋಲಾರ್ ಚಾರ್ಜರ್ ಮುಂತಾದ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿತ್ತು.