ಪೂಂಚ್ (ಜಮ್ಮು ಕಾಶ್ಮೀರ): ಭಯೋತ್ಪಾದಕರಿಗಾಗಿ ಕಣಿವೆನಾಡಿನಲ್ಲಿ ತೀವ್ರ ಶೋಧ ಕಾರ್ಯ ನಡೆಯುತ್ತಿದ್ದು, ಪೊಲೀಸರು ಮತ್ತು ಸೇನಾ ಪಡೆಗಳ ಜಂಟಿ ಕಾರ್ಯಾಚರಣೆ ವೇಳೆ ಭಯೋತ್ಪಾದಕರ ಅಡಗುದಾಣವೊಂದು ಪತ್ತೆಯಾಗಿದೆ.
ಪೂಂಚ್ ಜಿಲ್ಲೆಯ ಮೆಂದಾರ್ ತೆಹಸಿಲ್ ಬಳಿಯ ಕಾಲಾಬನ್ ಅರಣ್ಯ ಪ್ರದೇಶದಲ್ಲಿ ಅಡುಗುದಾಣವೊಂದು ಪತ್ತೆಯಾಗಿದ್ದು, ಒಂದು ಎಕೆ-56, ಮೂರು ಮ್ಯಾಗಜೀನ್, ಎರಡು ಬೈನಾಕುಲರ್ಗಳು, ಒಂದು ರೇಡಿಯೋ ಸೆಟ್, ಸೋಲಾರ್ ಚಾರ್ಜರ್, ಮುಂತಾದ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.
ಅಧಿಕಾರಿಗಳ ಮಾಹಿತಿಯಂತೆ ಅಕ್ಟೋಬರ್ 27 ಹಾಗೂ 28ರ ಮಧ್ಯರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಈ ಸಾಮಗ್ರಿಗಳು ಹಾಗೂ ಶಸ್ತ್ರಗಳು ಪತ್ತೆಯಾಗಿದ್ದು, ಉಗ್ರರಿಗಾಗಿ ಶೋಧ ಕಾರ್ಯ ಮುಂದುವರೆಯುತ್ತಿದೆ.
ಕೆಲವು ದಿನಗಳ ಹಿಂದಷ್ಟೇ ಉತ್ತರ ಕಾಶ್ಮೀರದ ತಂಗ್ಧರ್ ಸೆಕ್ಟರ್ನಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ಆರಂಭಿಸಿದ ಸೇನೆ, ಶಸ್ತ್ರಾಸ್ತ್ರ ಸಾಗಣೆಯನ್ನು ವಿಫಲಗೊಳಿಸಿತ್ತು. ಈ ವೇಳೆ ಐದು ಪಿಸ್ತೂಲ್, 10 ಮ್ಯಾಗಜೀನ್ಗಳು, 138 ಸುತ್ತು ಮದ್ದುಗುಂಡುಗಳನ್ನು ಒಳಗೊಂಡ ಚೀಲವನ್ನ ವಶಕ್ಕೆ ಪಡೆಯಲಾಗಿತ್ತು.