ಹೊಸದಿಲ್ಲಿ: ಕೋವಿಡ್-19 ತಡೆಗಟ್ಟಲು ದೇಶದ ಸಮಸ್ತ ಜನತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಆದರೆ ಹೀಗೆ ಮಾಡುವಾಗ ಕೋವಿಡ್-19 ಸೋಂಕಿತರನ್ನು ನಿರ್ಲಕ್ಷಿಸುವುದು ಬೇಡ. ಸಮಾಜದಿಂದಲೇ ತಾವು ಹೊರಗೆ ಎಂಬ ಭಾವನೆ ಅವರಿಗೆ ಬರುವಂತೆ ವರ್ತಿಸುವುದು ಬೇಡ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದೇಶಕ್ಕೆ ಭಾವನಾತ್ಮಕ ಸಂದೇಶ ನೀಡಿದ್ದಾರೆ.
ಟ್ವಿಟರ್ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ಅವರು, 'ಕೋವಿಡ್-19 ಸೋಂಕು ದೃಢಪಟ್ಟರಿಗೆ ನಮ್ಮಿಂದ ಎಲ್ಲಾ ಪ್ರೀತಿ ಹಾಗೂ ಕಾಳಜಿ ಇರುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿಯಾಗಿದೆ. ನಿಮಗೆ ಸೋಂಕು ತಗುಲದಂತೆ ಎಚ್ಚರ ವಹಿಸಿ. ಆದರೆ ಸೋಂಕಿತರು ಮತ್ತಷ್ಟು ಆಘಾತ ಅನುಭವಿಸುವಂತೆ ವರ್ತಿಸಬೇಡಿ. ಸಾಮಾಜಿಕ ಅಂತರ ಕಾಯ್ದುಕೊಂಡರೂ ಸೋಂಕಿತರನ್ನು ಸಮಾಜದಿಂದಲೇ ದೂರ ಮಾಡುವಂತಿಲ್ಲ. ನಾವೆಲ್ಲರೂ ಒಗ್ಗಟ್ಟಾದರೆ ಹಾಗೂ ಸೂಕ್ತ ಉಪಾಯಗಳನ್ನು ತಿಳಿದುಕೊಂಡರೆ ಈ ಮಹಾಮಾರಿಯನ್ನು ಸೋಲಿಸಬಹುದು' ಎಂದಿದ್ದಾರೆ.
ಈ ಪೋಸ್ಟ್ ಮಾಡುವ ಮುನ್ನ ಸಚಿನ್, ಪ್ರಧಾನಮಂತ್ರಿಗಳ ಪರಿಹಾರ ನಿಧಿ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು.