ಹೈದರಾಬಾದ್ (ತೆಲಂಗಾಣ): ಕುಟುಂಬದ ವಿರೋಧದ ನಡುವೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ದಂಪತಿಗಳ ಮೇಲೆ ಯುವತಿ ಪೋಷಕರು ಹಲ್ಲೆ ನಡೆಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿರುವ ಜೋಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದೆ.
ಮೋಟಾರ್ ಸೈಕಲ್ ಮೇಲೆ ತೆರಳುತ್ತಿದ್ದ ವೇಳೆ ಕಾರ್ನಲ್ಲಿ ಬಂದು ದಂಪತಿಗಳ ಮೇಲೆ ಹಲ್ಲೆ ನಡೆಸಲು ಯತ್ನ ನಡೆಸಲಾಗಿದೆ ಎನ್ನಲಾಗಿದೆ. 2019ರ ಮೇ 28ರಂದು ನಾಗಜ್ಯೋತಿ ಹಾಗೂ ಅಕ್ಷಯ ಕುಟುಂಬದ ವಿರೋಧದ ನಡುವೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ವೇಳೆ ವಿಚ್ಛೇದನ ನೀಡುವಂತೆ ಯುವತಿಗೆ ಒತ್ತಾಯ ಸಹ ಮಾಡಲಾಗಿತ್ತು.
ಕಳೆದ ಬುಧವಾರ ಪತಿ ಅಕ್ಷಯ್ ಜತೆ ಕಲ್ಲೂರು ವಾಸವಿ ಕಾಲೇಜ್ಗೆ ಪರೀಕ್ಷೆ ಬರೆಯಲು ತೆರಳಿದ್ದರು. ಅಲ್ಲಿಂದ ವಾಪಸ್ ಬರುತ್ತಿದ್ದಾಗ ಅವರ ಮೋಟಾರ್ ಸೈಕಲ್ ಮೇಲೆ ಕಾರು ಹರಿಸಲಾಗಿದೆ. ಈ ವೇಳೆ ನಾಗಜ್ಯೋತಿ ಗಾಯಗೊಂಡಿದ್ದು, ಅಕ್ಷಯ್ ಮೇಲೆ ಹಲ್ಲೆ ಸಹ ನಡೆಸಲಾಗಿದೆ. ಇದೀಗ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.