ಹೈದರಾಬಾದ್: ಕೊರೊನಾ ಸೋಂಕಿಗೆ ಲಸಿಕೆ ಸಿದ್ಧಪಡಿಸುತ್ತಿರುವ ಭಾರತ್ ಬಯೋಟೆಕ್ ಕ್ಯಾಂಪಸ್ಗೆ ತೆಲಂಗಾಣ ಗವರ್ನರ್ ಡಾ. ತಮಿಳಿಸೈ ಸೌಂದರ್ರಾಜನ್ ಭೇಟಿ ನೀಡಿದ್ದಾರೆ.
ಲಸಿಕೆ ಅಭಿವೃದ್ಧಿಪಡಿಸಲು ವಿಜ್ಞಾನಿಗಳು ಮತ್ತು ಸಂಶೋಧಕರು ದಣಿವಿಲ್ಲದಂತೆ ಕೆಲಸ ಮಾಡುತ್ತಿರುವುದನ್ನು ಗಮನಿಸಿದ್ದ ರಾಜ್ಯಪಾಲರು, 2020ರ ಅಂತ್ಯದ ವೇಳೆಗೆ ಲಸಿಕೆ ಬಿಡುಗಡೆಯಾಗುವ ಆಶಯ ವ್ಯಕ್ತಪಡಿಸಿದ್ದಾರೆ.
ಭೇಟಿ ವೇಳೆ ಮಾತನಾಡಿದ ಗವರ್ನರ್, ಕೊರೊನಾ ಸೋಂಕಿಗೆ ಪರಿಣಾಮಕಾರಿ ಲಸಿಕೆಗಾಗಿ ಇಡೀ ಪ್ರಪಂಚವೇ ಹೈದರಾಬಾದ್ನತ್ತ ನೋಡುತ್ತಿದೆ ಎಂದಿದ್ದಾರೆ.
ಸೋಂಕಿಗೆ ತುತ್ತಾಗುತ್ತಿರುವ ಅನೇಕ ಪ್ರಮುಖ ನಾಯಕರು, ಸೆಲೆಬ್ರಿಟಿಗಳು ಮತ್ತು ಸಾಮಾನ್ಯ ಜನರ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ ರಾಜ್ಯಪಾಲರು, ಕೋವಿಡ್ -19 ಕಾರಣದಿಂದಾಗಿ ಮಾನವಕುಲದ ಸಂಕಷ್ಟವನ್ನು ಕೊನೆಗೊಳಿಸಲು ವರ್ಷದ ಅಂತ್ಯದ ವೇಳೆಗೆ ಪರಿಣಾಮಕಾರಿ ಲಸಿಕೆ ನೀಡುವಂತೆ ಕೇಳಿಕೊಂಡಿದ್ದಾರೆ.
ಕೋವಿಡ್ -19 ಲಸಿಕೆ ಸಂಶೋಧನೆ ಮತ್ತು ಪ್ರಯೋಗಗಳಲ್ಲಿ ತೊಡಗಿರುವ ವಿಜ್ಞಾನಿಗಳೊಂದಿಗೆ ಮಾತುಕತೆ ನಡೆಸಿದ ಗವರ್ನರ್, ಕೋವಿಡ್-19ಗೆ ಲಸಿಕೆ ಸಿದ್ಧಪಡಿಸಲು ಎಲ್ಲಾ ವಿಜ್ಞಾನಿಗಳು ಮತ್ತು ಇತರ ಸಂಶೋಧಕರು ಪಟ್ಟು ಹಿಡಿದು ಮಾಡುತ್ತಿರುವ ಕೆಲಸಕ್ಕಾಗಿ ನಾನು ನಮಸ್ಕರಿಸುತ್ತೇನೆ. ತೆಲಂಗಾಣ ಅಥವಾ ಭಾರತ ಮಾತ್ರವಲ್ಲ, ನಮ್ಮ ವಿಜ್ಞಾನಿಗಳು ಕೋವಿಡ್-19ಗೆ ಪರಿಣಾಮಕಾರಿ, ಕೈಗೆಟುಕುವ ಮತ್ತು ಸುರಕ್ಷಿತ ಲಸಿಕೆಯನ್ನು ಹೊರ ತರುತ್ತಾರೆ ಎಂದು ಇಡೀ ಜಗತ್ತು ಆಶಿಸುತ್ತಿದೆ ಎಂದಿದ್ದಾರೆ.