ಹೈದರಾಬಾದ್ : ಸರ್ಕಾರ ಸೂಚಿಸಿದಂತೆ ನಿಯಂತ್ರಿತ ಕೃಷಿ ಮಾಡಲು ಒಪ್ಪಿಕೊಂಡಿದ್ದಕ್ಕಾಗಿ ರಾಜ್ಯದ ರೈತರನ್ನು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಶ್ಲಾಘಿಸಿದ್ದಾರೆ.
ನಗರದ ಪ್ರಗತಿ ಭವನದಲ್ಲಿ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿರುವ ಲಾಭದಾಯಕ ಬೆಳೆಗಳನ್ನು ಬೆಳೆಯಲು ಮನವಿ ಮಾಡಿತ್ತು. ಇದಕ್ಕೆ ರೈತರು ಒಪ್ಪಿಕೊಂಡಿದ್ದಾರೆ. ಹಾಗಾಗಿ ಅವರನ್ನು ಅಭಿನಂದಿಸುತ್ತೇನೆ. ರೈತರು ಇನ್ಪುಟ್ ಹಣದ ಬಗ್ಗೆ ಚಿಂತಿಸಬೇಡಿ. ರೈತಬಂಧು ಯೋಜನೆಯಡಿ ನೀಡಲಾದ ಹಣವನ್ನು ಬಳಸಿಕೊಂಡು ಕೃಷಿ ಚಟುವಟಿಕೆ ಪ್ರಾರಂಭಿಸಿ ಎಂದು ತಿಳಿಸಿದರು. ಅಲ್ಲದೇ, ಎಲ್ಲ ಕೃಷಿ ಸಮುದಾಯಕ್ಕೂ ರೈತು ಬಂಧು ಯೋಜನೆಯ ಸೌಲಭ್ಯಗಳನ್ನು ವಿಸ್ತರಿಸಿ ಮತ್ತು ಸರ್ವ ಋತು ಬೆಳೆಯನ್ನು ಬೆಳೆಯಲು ಯೋಜನೆ ರೂಪಿಸಲಾಗುವುದು. ಒಂದು ವಾರ ಅಥವಾ ಹತ್ತು ದಿನಗಳ ಒಳಗೆ ರೈತರ ಬ್ಯಾಂಕ್ ಖಾತೆಗಳಿಗೆ ರೈತಬಂಧು ಯೋಜನೆಯ ಹಣವನ್ನು ಜಮಾ ಮಾಡಬೇಕು ಎಂದು ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈಗಾಗಲೇ 11 ಲಕ್ಷ ಎಕರೆ ಪ್ರದೇಶದಲ್ಲಿ ನಿಯಂತ್ರಿತ ಕೃಷಿ ಆಧಾರಿತ ಬೀಜಗಳನ್ನು ಬಿತ್ತಲಾಗಿದೆ. ಕೃಷಿ ಮಾಡಬೇಕಾದ ಬೆಳೆಗಳ ಬಗ್ಗೆ ಸರ್ಕಾರ ನೀಡಿದ ಸಲಹೆಯ ಆಧಾರದ ಮೇಲೆ ರೈತರು ಬೀಜಗಳನ್ನು ಖರೀದಿಸಿದ್ದಾರೆ ಎಂದು ಮುಖ್ಯಮಂತ್ರಿಗೆ ಅಧಿಕಾರಿಗಳು ಮಾಹಿತಿ ನೀಡಿದರು.
ರಾಜ್ಯದ 1,25,45,061 ಎಕರೆ ಪ್ರದೇಶದಲ್ಲಿ ನಿಯಂತ್ರಕ ಕೃಷಿ ನೀತಿಯನ್ನು ಜಾರಿಗೆ ತರಲು ರೈತರು ಸಿದ್ಧರಾಗಿದ್ದಾರೆ. ತೆಲಂಗಾಣ ಸಮಾಜವು ಪ್ರಬುದ್ಧವಾಗಿದೆ. ರಾಜ್ಯವು ಸಾಕಷ್ಟು ಜಾಗೃತಿ ಹೊಂದಿರುವ ರೈತರನ್ನು ಹೊಂದಿದೆ. ತೆಲಂಗಾಣ ದೇಶದ ಕೃಷಿ ಆಧಾರಿತ ರಾಜ್ಯಗಳಲ್ಲಿ ಒಂದಾಗಿದೆ. ಭವಿಷ್ಯ ಉಜ್ವಲವಾಗಲು ಮತ್ತು ನಿರ್ಧಿಷ್ಟ ಗುರಿಯತ್ತ ಸಾಗಲು ಸರ್ಕಾರ ನಿಯಂತ್ರಿತ ಕೃಷಿ ನೀತಿಯನ್ನು ಸೂಚಿಸಿತು. ಈ ಯೋಜನೆಯ ಮೂಲಕ ಕೃಷಿಯನ್ನು ಸ್ಥಿರವಾಗಿಸುವುದು, ಸಾಂಸ್ಥಿಕಗೊಳಿಸುವುದು ಮತ್ತು ರೈತರಿಗೆ ಖಚಿತ ಆದಾಯ ತಂದು ಕೊಡುವುದು ಸರ್ಕಾರದ ಬಯಕೆಯಾಗಿದೆ ಎಂದು ಸಿಎಂ ತಿಳಿಸಿದರು.