ಹೈದರಾಬಾದ್: ಅಯೋಧ್ಯೆಯಲ್ಲಿ ನಡೆಯುವ ರಾಮ ಮಂದಿರದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರನ್ನು ತೆಲಂಗಾಣ ಬಿಜೆಪಿ ಮುಖಂಡ ಹಾಗೂ ವಕ್ತಾರ ಕೃಷ್ಣ ಸಾಗರ್ ರಾವ್ ಆಹ್ವಾನಿಸಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕೆ ಅಯೋಧ್ಯೆಯಲ್ಲಿ ಆಗಸ್ಟ್ 5 ರಂದು ಭೂಮಿ ಪೂಜೆ ನೆರವೇರಲಿದ್ದು, ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ವಿಶ್ವದಾದ್ಯಂತ ಇರುವ ಕೋಟ್ಯಂತರ ಹಿಂದೂಗಳ ಕನಸು ಬಿಜೆಪಿ ಆಡಳಿತಾವಧಿಯಲ್ಲಿ ಸಾಕಾರಗೊಂಡಿದ್ದಕ್ಕೆ ಬಿಜೆಪಿ ಹೆಮ್ಮೆ ಪಡುತ್ತದೆ ಎಂದು ಕೃಷ್ಣ ಸಾಗರ್ ರಾವ್ ಹೇಳಿದರು.
ಇದಕ್ಕೆ ಎಡಪಂಥೀಯರು ಹಾಗೂ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನಂತಹ ಗುಂಪುಗಳು ಆಕ್ಷೇಪ ವ್ಯಕ್ತಪಡಿಸಿರಬಹುದು. ಆದರೂ ನಾನು ಅಸಾದುದ್ದೀನ್ ಒವೈಸಿ ಸೇರಿದಂತೆ ಕಮ್ಯುನಿಸ್ಟ್ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತೇನೆ. ಇಲ್ಲಿಗೆ ಬರುವ ಮೂಲಕ ಅವರು ತಮ್ಮ ಪಕ್ಷಗಳ ಜಾತ್ಯತೀತ ನಿಲುವನ್ನ, ಭ್ರಾತೃತ್ವ, ಸಹಿಷ್ಣುತೆಯ ಮನೋಭಾವವನ್ನು ಪ್ರದರ್ಶಿಸಬಹುದು ಎಂದು ಕೃಷ್ಣ ಸಾಗರ್ ವ್ಯಂಗ್ಯವಾಡಿದ್ದಾರೆ.