ಹೈದರಾಬಾದ್: ಕೊರೊನಾದಿಂದ ಹಂತಹಂತವಾಗಿ ರಾಜ್ಯ ಚೇತರಿಸಿಕೊಳ್ಳುತ್ತಿದೆ. ಈ ನಡುವೆಯೇ ರಾಜ್ಯವು ಅನ್ನದ ಬಟ್ಟಲಾಗಲು ಮುಂದಾಗಿದೆ.
ರಾಜ್ಯದಲ್ಲಿ ನೀರಾವರಿ ಸೌಲಭ್ಯಗಳ ಸುಧಾರಣೆಯ ನಂತರ ದಾಖಲೆಯ ಮಟ್ಟದ ಭತ್ತವನ್ನು ಬೆಳೆಯಲಾಗುತ್ತಿದೆ. ಈ ಹಿನ್ನೆಲೆ ರಾಜ್ಯವು ದೇಶದ ಅನ್ನದ ಬಟ್ಟಲಾಗುತ್ತದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಹೇಳಿದ್ದಾರೆ.
ಇಳುವರಿ ಹೆಚ್ಚಾಗುತ್ತಿದ್ದು ಹಾಗೂ ಭತ್ತ ಬೆಳೆಯುವ ಭೂಮಿಯೂ ಕೂಡ ಹೆಚ್ಚಳವಾಗುತ್ತಿರುವುದರಿಂದ ಕೃಷಿ ಉತ್ಪನ್ನಗಳಿಗೆ ಸಮಂಜಸವಾದ ಬೆಂಬಲ ಬೆಲೆ ನೀಡಲು ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂದು ಅವರು ಹೇಳಿದರು.
ಇನ್ನು ಹೆಚ್ಚುವರಿಯಾಗಿ 40 ಲಕ್ಷ ಟನ್ ಸಾಮರ್ಥ್ಯದ ಗೋದಾಮುಗಳನ್ನು ನಿರ್ಮಿಸಲು ಮತ್ತು 2,500 ರೈತ ಗುಂಪುಗಳನ್ನು ರಚಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಿಎಂ ನಿರ್ದೇಶನ ನೀಡಿದರು. ಕೃಷಿ ಮತ್ತು ನಾಗರಿಕ ಸರಬರಾಜು ಸಚಿವರು ಮತ್ತು ಉನ್ನತ ಅಧಿಕಾರಿಗಳೊಂದಿಗೆ ನಡೆಸಿದ ಪರಿಶೀಲನಾ ಸಭೆಯಲ್ಲಿ, ತೆಲಂಗಾಣ ಕೃಷಿಗೆ ಪ್ರಧಾನ ರಾಜ್ಯವಾಗಿದೆ. ಇಲ್ಲಿ 60-65 ಲಕ್ಷ ರೈತರು ಇದ್ದು ಇನ್ನೂ ಇನ್ನೂ ಅನೇಕರು ಕೃಷಿಯನ್ನು ಅವಲಂಬಿಸಿದ್ದಾರೆ. ನೀರಾವರಿ ಯೋಜನೆಗಳ ನಿರ್ಮಾಣಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಲು ಮುಂದಾಗಿರುವುದರಿಂದ ಮುಂದಿನ ದಿನಗಳಲ್ಲಿ ಸುಮಾರು 1,300 ಟಿಎಂಸಿ ಗೋಧಾವರಿ ಮತ್ತು ಕೃಷ್ಣ ನೀರನ್ನು ಕೃಷಿಗೆ ಬಳಸಿಕೊಳ್ಳಲಾಗುವುದು. ಮಿಷನ್ ಕಾಕತೀಯ ಅಡಿಯಲ್ಲಿ ಟ್ಯಾಂಕ್‌ಗಳ ಪುನರುಜ್ಜೀವನಗೊಂಡಿದ್ದು, 24 ಗಂಟೆಗಳ ಉಚಿತ ವಿದ್ಯುತ್ ನೀಡಿದ್ದರಿಂದ ಸುಧಾರಣೆ ನೀರಾವರಿ ಸುಧಾರಣೆಗೊಂಡಿದೆ ಎಂದರು.
ಈ ಯೋಜನೆಗಳ ಅಡಿಯಲ್ಲಿ ಟ್ಯಾಂಕ್‌ಗಳು ಮತ್ತು ಬೋರ್‌ವೆಲ್‌ಗಳನ್ನು ಬಳಕೆ ಮಾಡಿಕೊಂಡು 1.45 ಕೋಟಿ ಎಕರೆ ಪ್ರದೇಶದಲ್ಲಿ ಎರಡು ಬೆಳೆಗಳು ಮತ್ತು 10 ಲಕ್ಷ ಎಕರೆಗಳಲ್ಲಿ ಮೂರು ಬೆಳೆಗಳನ್ನು ಬೆಳೆಯುವ ಸಾಧ್ಯತೆಯಿದೆ. ಈ ಹಿನ್ನೆಲೆ ತೆಲಂಗಾಣ ರಾಜ್ಯವು ಭಾರತದ ಅಕ್ಕಿ ಬಟ್ಟಲಾಗುತ್ತದೆ ಎಂದರು.