ಹೈದರಾಬಾದ್(ತೆಲಂಗಾಣ): ನಿಜಾಮಾಬಾದ್ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಬಿಗಲ ಗಣೇಶ್ಗೆ ಸೋಮವಾರ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಈ ಮೂಲಕ ತೆಲಂಗಾಣದಲ್ಲಿ ಒಟ್ಟು ಮೂವರು ಶಾಸಕರಲ್ಲಿ ಸೋಂಕು ದೃಢಪಟ್ಟಿದೆ.
ಮೂರು ದಿನಗಳ ಹಿಂದೆ ಜನ್ಗಾಂವ್ ಶಾಸಕ ಮತಿರೆಡ್ಡಿ ಯಾದಗಿರಿ ರೆಡ್ಡಿ ಅವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಅವರಲ್ಲಿ ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ನಂತರ ಅವರನ್ನ ಮನೆಗೆ ಕಳುಹಿಸಿ ಹೋಮ್ ಕ್ವಾರಂಟೈನ್ನಲ್ಲಿ ಇಡಲಾಗಿದೆ.
ಭಾನುವಾರ ನಿಜಾಮಾಬಾದ್ ಗ್ರಾಮೀಣ ಶಾಸಕ ಬಾಜಿರೆಡ್ಡಿ ಗೋವರ್ಧನ್ ಅವರಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಇದರಿಂದಾಗಿ ತೆಲಂಗಾಣದಲ್ಲಿ ಒಟ್ಟು ಮೂವರು ಶಾಸಕರಿಗೆ ಸೋಂಕು ದೃಢಪಟ್ಟಿದೆ.
ಅಚ್ಚರಿಯ ವಿಷಯವೆಂದರೆ ಈ ಮೂವರೂ ಶಾಸಕರೂ ಕೂಡ ತೆಲಂಗಾಣ ರಾಷ್ಟ್ರಸಮಿತಿ (ಟಿಆರ್ಎಸ್) ಪಕ್ಷಕ್ಕೆ ಸೇರಿದವರಾಗಿದ್ದಾರೆ. ಎಲ್ಲ ಶಾಸಕರ ಸಂಪರ್ಕಿತರನ್ನು ಹುಡುಕಿ ಕ್ವಾರಂಟೈನ್ನಲ್ಲಿ ಇಡಲಾಗಿದೆ.
ತೆಲಂಗಾಣದಲ್ಲಿ ಈವರೆಗೆ 4,974 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 2,377 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 185 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.