ತಿರುವಳ್ಳೂರು(ತಮಿಳುನಾಡು): ತನ್ನ ಮೇಲೆ ಅತ್ಯಾಚಾರವೆಸಲು ಬಂದ ಕಾಮುಕನನ್ನು ಕೊಲೆ ಮಾಡಿರುವ ಯುವತಿಯೋರ್ವಳು ಪೊಲೀಸ್ ಠಾಣೆಗೆ ತೆರಳಿರುವ ಘಟನೆ ತಮಿಳುನಾಡಿನ ತಿರುವಳ್ಳೂರ್ನಲ್ಲಿ ನಡೆದಿದೆ.
19 ವರ್ಷದ ಯುವತಿ ಮೇಲೆ 24 ವರ್ಷದ ಸಂಬಂಧಿ ಅತ್ಯಾಚಾರವೆಸಗಲು ಮುಂದಾಗಿದ್ದಾನೆ. ಈ ವೇಳೆ ಆತನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದು, ತದನಂತರ ಪೊಲೀಸ್ ಠಾಣೆಗೆ ತೆರಳಿದ್ದಾಳೆ. ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಶೋಲಾವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನ 24 ವರ್ಷದ ಅಜಿತ್ ಕುಮಾರ್ ಎಂದು ಗುರುತಿಸಲಾಗಿದ್ದು, 19 ವರ್ಷದ ಯುವತಿ ಶೋಲಾವರಂನಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ಬಂದ ವೇಳೆ ಈ ದುರ್ಘಟನೆ ನಡೆದಿದೆ. ಯುವತಿ ಶೌಚಾಲಯಕ್ಕೆ ತೆರಳಿದ್ದಾಗ ಆಕೆಯ ಮೇಲೆ ದುಷ್ಕೃತ್ಯವೆಸಗಲು ಆತ ಮುಂದಾಗಿದ್ದ ಎಂದು ವರದಿಯಾಗಿದೆ. ಅಜಿತ್ ಕುಮಾರ್ನನ್ನು ದೂರಕ್ಕೆ ತಳ್ಳಿದ್ದು, ಆತ ಕೆಳಗೆ ಬೀಳುತ್ತಿದ್ದಂತೆ ಚಾಕುವಿನಿಂದ ಇರಿದಿದ್ದಾಳೆ.
ಆತನಿಗೆ ಚಾಕುವಿನಿಂದ ಇರಿದ ಬಳಿಕ ಯುವತಿ ಪೊಲೀಸ್ ಠಾಣೆಗೆ ತೆರಳಿದ್ದಾಳೆ. ಜತೆಗೆ ಸ್ಥಳದಲ್ಲಿ ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದಾಳೆ. ಇನ್ನು ಪೊಲೀಸರು ಆಕೆಗೆ ರಕ್ಷಣೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅಜಿತ್ ಕುಮಾರ್ನಿಗೆ ಈಗಾಗಲೇ ಎರಡು ಮಕ್ಕಳಿದ್ದು, ಹೆಂಡತಿ ಜತೆ ಜಗಳವಾಗಿದ್ದ ಕಾರಣ ಆತ ಬೇರೆಯಾಗಿ ವಾಸ ಮಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನ ಈಗಾಗಲೇ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈಟಿವಿ ಭಾರತ ಜತೆ ಮಾತನಾಡಿರುವ ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್, ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 106 ಹಾಗೂ 302ರ ಅಡಿಯಲ್ಲಿ ದೂರು ದಾಖಲು ಮಾಡಿಕೊಳ್ಳಲಾಗಿದೆ ಎಂದಿದ್ದಾರೆ. ಶೋಲಾವರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.