ನವದೆಹಲಿ: ಟಾಟಾ ಸ್ಟೀಲ್ ಲಿಮಿಟೆಡ್ ತನ್ನ ಉಕ್ಕಿನ ಉದ್ಯಮ ಸಂಸ್ಥೆಯಾದ ಇಂಡಿಯನ್ ಸ್ಟೀಲ್ ಅಸೋಸಿಯೇಶನ್ (ಐಎಸ್ಎ) ಯಿಂದ ಸದಸ್ಯತ್ವವನ್ನು ಹಿಂತೆಗೆದುಕೊಂಡಿದೆ.
ಅಲ್ಲದೆ, ಟಾಟಾ ಸ್ಟೀಲ್ ಲಿಮಿಟೆಡ್ ಕಂಪನಿಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಟಿ ವಿ ನರೇಂದ್ರನ್ ಸಂಘದ ಅಧ್ಯಕ್ಷ ಸ್ಥಾನದಿಂದಲೂ ಕೆಳಗಿಳಿದಿದ್ದಾರೆ. ಈ ಸ್ಥಾನದ ಅವಧಿ ಆಗಸ್ಟ್‌ನಲ್ಲಿ ಕೊನೆಗೊಳ್ಳಬೇಕಿತ್ತು. ಐಎಸ್ಎ ಅಧ್ಯಕ್ಷರನ್ನು ಎರಡು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗುತ್ತದೆ.
ಅಭಿವೃದ್ಧಿಯ ವಿವಿಧ ಪರಿಗಣನೆಗಳ ಕಾರಣದಿಂದಾಗಿ ಟಾಟಾ ಸ್ಟೀಲ್ ಕಂಪನಿಯು ಐಎಸ್ಎದಿಂದ ತನ್ನ ಸದಸ್ಯತ್ವವನ್ನು ಹಿಂತೆಗೆದುಕೊಂಡಿದೆ ಎಂದು ಟಾಟಾ ಸ್ಟೀಲ್ ವಕ್ತಾರರು ತಿಳಿಸಿದ್ದಾರೆ. ಅದರ ಜೊತೆಗೆ ಟಾಟಾ ಸ್ಟೀಲ್ ಎಂಡಿ ಟಿ ವಿ ನರೇಂದ್ರನ್ ಐಎಸ್ಎನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ನರೇಂದ್ರನ್ ಅವರ ರಾಜೀನಾಮೆಯನ್ನು ದೃಢಪಡಿಸಿದ ಐಎಸ್ಎ ಅಧಿಕಾರಿಯೊಬ್ಬರು, ಅವರ ಹಠಾತ್ ರಾಜೀನಾಮೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಹೇಳಿದ್ದಾರೆ. ನರೇಂದ್ರನ್ ಜಾಗತಿಕ ವಿಶ್ವ ಉಕ್ಕಿನ ಸಂಘದ (ವರ್ಲ್ಡ್ ಸ್ಟೀಲ್) ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿದ್ದಾರೆ.
ಅಷ್ಟೇ ಅಲ್ಲದೆ ಪ್ರಮುಖ ಉಕ್ಕು ತಯಾರಕರಾದ ಜೆಎಸ್‌ಡಬ್ಲ್ಯೂ ಸ್ಟೀಲ್ ಲಿಮಿಟೆಡ್, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಎಐಎಲ್), ರಾಷ್ಟ್ರೀಯ ಇಸ್ಪತ್ ನಿಗಮ್ ಲಿಮಿಟೆಡ್ (ಆರ್ಐಎನ್ಎಲ್), ಜಿಂದಾಲ್ ಸ್ಟೀಲ್ ಅಂಡ್ ಪವರ್ ಲಿಮಿಟೆಡ್ (ಜೆಎಸ್‌ಪಿಎಲ್) ಮತ್ತು ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಲಿಮಿಟೆಡ್ ಐಎಸ್‌ಎನ ಸದಸ್ಯರಾಗಿದ್ದಾರೆ.