ನವದೆಹಲಿ: ಕಾರಿನ ಮೈಲೇಜ್ ಬಗ್ಗೆ ಸುಳ್ಳು ಜಾಹೀರಾತು ನೀಡಿ ಗ್ರಾಹಕರನ್ನು ತಪ್ಪುದಾರಿಗೆಳೆಯುವ ಆರೋಪದ ಮೇಲೆ ರಾಷ್ಟ್ರೀಯ ಗ್ರಾಹಕ ವಿವಾದಗಳ ಪರಿಹಾರ ಆಯೋಗ (ಎನ್‌ಸಿಡಿಆರ್‌ಸಿ) ಟಾಟಾ ಮೋಟರ್ಸ್ಗೆ 3 ಲಕ್ಷದ 50 ಸಾವಿರ ರೂಪಾಯಿ ದಂಡ ವಿಧಿಸಿದೆ.
ಜಾಹೀರಾತಿನಲ್ಲಿ ನೀಡಲಾದ ಮಾಹಿತಿಗಳಿಂದಾಗಿ ಗ್ರಾಹಕರು ಕಾರನ್ನು ಖರೀದಿಸಲು ಆಕರ್ಷಿತರಾಗಿದ್ದಾರೆ ಎಂದು ಆಯೋಗ ಗಮನಿಸಿದೆ. ಆದರೆ ವಿಭಿನ್ನ ದಿನಾಂಕಗಳಲ್ಲಿ ಮಾಡಿದ ಟೆಸ್ಟ್ ಡ್ರೈವ್‌ಗಳು ಜಾಹೀರಾತಿನಲ್ಲಿ ತಿಳಿಸಿದಷ್ಟು ಮೈಲೇಜ್ ನೀಡಿಲ್ಲ ಎಂದು ಸಾಬೀತಾಗಿದೆ ಅಂತ ಆಯೋಗ ತಿಳಿಸಿದೆ.
ಕೋಲ್ಕತ್ತಾ ಮೂಲದ ಪ್ರದೀಪ್ತಾ ಕುಂದು ಎಂಬುವವರು ಟಾಟಾ ಇಂಡಿಗೋ ಕಾರು ಲೀಟರ್ಗೆ 25 ಕಿ.ಮೀ. ಮೈಲೇಜ್ ನೀಡುತ್ತದೆ ಎಂಬ ಜಾಹೀರಾತು ನೋಡಿದ ನಂತರ ಕಾರು ಖರೀದಿಸಿದ್ದರು. ಆದರೆ ಜಾಹೀರಾತಿನಲ್ಲಿ ನೀಡಿದ ಭರವಸೆಯಂತೆ ಮೈಲೇಜ್ ನೀಡದ ಕಾರಣ ನಿರಾಶೆಗೊಂಡು ದೂರು ದಾಖಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ್ದ ರಾಜ್ಯ ಗ್ರಾಹಕ ವಿವಾದಗಳ ಪರಿಹಾರ ಆಯೋಗ ಪ್ರದೀಪ್ತಾ ಕುಂದು ಅವರಿಗೆ 2 ಲಕ್ಷ ರೂ. ಪರಿಹಾರ ಮತ್ತು ರಾಜ್ಯ ಗ್ರಾಹಕ ಕಲ್ಯಾಣ ನಿಧಿಗೆ 1.5 ಲಕ್ಷ ರೂ. ದಂಡ ನೀಡುವಂತೆ ಆದೇಶಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಟಾಟಾ ಮೋಟರ್ಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದ ರಾಷ್ಟ್ರೀಯ ಗ್ರಾಹಕ ವಿವಾದಗಳ ಪರಿಹಾರ ಆಯೋಗ, ರಾಜ್ಯ ಆಯೋಗದ ಆದೇಶ ಎತ್ತಿ ಹಿಡಿದಿದ್ದು 3.5 ಲಕ್ಷ ದಂಡ ನೀಡುವಂತೆ ಆದೇಶಿಸಿದೆ.