ನವದೆಹಲಿ: ತಾಯ್ತನದ ವಯಸ್ಸು, ತಾಯಂದಿರ ಮರಣ ಅನುಪಾತ (ಎಂಎಂಆರ್) ಕಡಿಮೆ ಮಾಡುವ ಅಗತ್ಯತೆ, ಪೌಷ್ಠಿಕಾಂಶದ ಅಸಮತೋಲನ ಸೇರಿದಂತೆ ಇತರ ಸಂಬಂಧಿತ ವಿಷಯಗಳ ಬಗ್ಗೆ ಪರಿಶೀಲಿಸಲು ಕೇಂದ್ರ ಸರ್ಕಾರವು ಸಾಮಾಜಿಕ ಕಾರ್ಯಕರ್ತೆ ಮತ್ತು ಸಮತಾ ಪಕ್ಷದ ಮಾಜಿ ಅಧ್ಯಕ್ಷೆ ಜಯಾ ಜೇಟ್ಲಿ ನೇತೃತ್ವದಲ್ಲಿ ಹತ್ತು ಸದಸ್ಯರ ಕಾರ್ಯಪಡೆಯೊಂದನ್ನು ರಚಿಸಿದೆ.
ಮಹಿಳೆಯರಿಗೆ ಮದುವೆಯ ಕನಿಷ್ಠ ವಯೋಮಿತಿ, ತಾಯ್ತನದ ಮೇಲೆ ಅದರ ಪರಿಣಾಮಗಳ ಕುರಿತು ಅಧ್ಯಯನ ಮಾಡಲು ಆರು ತಿಂಗಳೊಳಗಾಗಿ ಸಮಿತಿಯೊಂದನ್ನು ರಚಿಸುವ ವಿಚಾರವನ್ನು 2020-21ರ ಬಜೆಟ್ ಭಾಷಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದ್ದರು.
ಕಾರ್ಯಪಡೆಯ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಕಾರ್ಯಪಡೆ ರಚಿಸಿದೆ. ಎಂಎಂಆರ್ ಅನ್ನು ಕಡಿಮೆ ಮಾಡುವುದು, ಪೌಷ್ಠಿಕತೆ ಮಟ್ಟವನ್ನು ಸುಧಾರಿಸುವುದು ಮತ್ತು ಉನ್ನತ ಶಿಕ್ಷಣದ ಅವಕಾಶಗಳನ್ನು ಹೆಚ್ಚಿಸುವುದು ಸೇರಿದಂತೆ ಯುವತಿಯರ ಯೋಗಕ್ಷೇಮಕ್ಕಾಗಿ ಹಲವು ಶಿಫಾರಸುಗಳನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಒಂದು ಲಕ್ಷ ಶಿಶುಗಳ ಜನನಗಳಿಗೆ ನಿರ್ದಿಷ್ಟ ಅವಧಿಯಲ್ಲಾಗುವ ತಾಯಂದಿರ ಸಾವುಗಳ ಸಂಖ್ಯೆಯನ್ನು ತಾಯಿಯ ಮರಣ ಅನುಪಾತ (ಎಂಎಂಆರ್) ಎಂದು ಕರೆಯಲಾಗುತ್ತದೆ. ಲಭ್ಯವಿರುವ ಯೂನಿಸೆಫ್ ಮಾಹಿತಿಯ ಪ್ರಕಾರ 2000 ರಿಂದ 2017ರ ವರೆಗೆ ಜಾಗತಿಕ ಮಟ್ಟದಲ್ಲಿ ಶೇ. 38 ರಷ್ಟು ಎಂಎಂಆರ್ ಕುಸಿದಿದೆ. ನೀತಿ ಆಯೋಗದ ಮಾಹಿತಿಯ ಪ್ರಕಾರ ಭಾರತದಲ್ಲಿ ಕೂಡ MMR ಇಳಿಕೆಯಾಗಿದೆ. 2004-2006ರಲ್ಲಿ ಒಂದು ಲಕ್ಷ ಶಿಶುಗಳ ಜನನದ ವೇಳೆ 254 ತಾಯಂದಿರು ಮೃತಪಟ್ಟಿದ್ದರು. ಈ ಪ್ರಮಾಣ 2014-2016ರಲ್ಲಿ ಇಳಿಕೆಯಾಗಿದ್ದು, 130 ತಾಯಂದಿರು ಸಾವನ್ನಪ್ಪಿದ್ದಾರೆ.
ಈ ಕಾರ್ಯಪಡೆಯು 2020ರ ಜುಲೈ 31 ರೊಳಗೆ ವರದಿ ಸಲ್ಲಿಸಲಿದೆ. ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪೌಲ್, ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣ, ಆರೋಗ್ಯ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು, ಶಿಕ್ಷಣ ತಜ್ಞರಾದ ನಜ್ಮಾ ಅಖ್ತರ್, ವಸುದಾ ಕಾಮತ್ ಮತ್ತು ದೀಪ್ತಿ ಶಾ ಕಾರ್ಯಪಡೆಯ ಇತರೆ ಸದಸ್ಯರಾಗಿದ್ದಾರೆ.