ವಾಷಿಂಗ್ಟನ್ ಡಿಸಿ [ಯುಎಸ್ಎ]: ಅಮೆರಿಕದ ಹೊಸ ಭಾರತೀಯ ರಾಯಭಾರಿಯಾಗಿ ತಾರಂಜಿತ್ ಸಿಂಗ್ ಸಂಧು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಭಾರತದ ಹಿರಿಯ ಅಧಿಕಾರಿಯೊಬ್ಬರು ಎಎನ್‌ಐಗೆ ಮಾಹಿತಿ ನೀಡಿದ್ದಾರೆ.
ಮಾಹಿತಿಗಳ ಪ್ರಕಾರ, ಈ ತಿಂಗಳ ಕೊನೆಯಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ರಾಯಭಾರಿ ನೇಮಕಕ್ಕೆ ಸಂಬಂಧಿಸಿದ ಕಡತವನ್ನು ಸಮರ್ಥ ಪ್ರಾಧಿಕಾರವು ತೆರವುಗೊಳಿಸಿದೆ. ಆದರೆ, ಈ ಬಗ್ಗೆ ಸರ್ಕಾರ ಇನ್ನೂ ಅಧಿಕೃತ ಪ್ರಕಟಣೆ ನೀಡಿಲ್ಲ.
ತಾರಂಜಿತ್ ಸಿಂಗ್ ಸಂಧು ಜನವರಿ 24, 2017ರಿಂದ ಶ್ರೀಲಂಕಾದ ಪ್ರಸ್ತುತ ಭಾರತದ ಹೈಕಮಿಷನರ್ ಆಗಿದ್ದಾರೆ. ಈ ಹಿಂದೆ ಅವರು 2013 ರಿಂದ 2017ರವರೆಗೆ ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲಿ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. 1997 ರಿಂದ 2000 ರವರೆಗೆ ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ಕಾರ್ಯಾಲಯದಲ್ಲಿ ಸೇವೆ ಸಲ್ಲಿಸಿದ್ದರು.
ಫೆಬ್ರವರಿ ಅಂತ್ಯದ ವೇಳೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಹಾಗಾಗಿ ಸಂಧು ಅವರ ನೇಮಕಾತಿಯನ್ನು ಶೀಘ್ರದಲ್ಲೇ ಘೋಷಿಸಲಾಗುವುದು. ಹಾಗೆಯೇ, ವಾಷಿಂಗ್ಟನ್ ಡಿಸಿಯಲ್ಲಿಯೂ ಹೊಸ ನೇಮಕಾತಿಯ ಕಾರ್ಯವಿಧಾನಗಳು ಜರುಗುತ್ತಿವೆಯೆಂದು ಮಾಹಿತಿಗಳಿವೆ.