ಕೊಯಮತ್ತೂರು : ಮಾನವ - ವನ್ಯ ಪ್ರಾಣಿಗಳ ನಡುವಿನ ಸಂಘರ್ಷ ತಪ್ಪಿಸಲು ಮತ್ತು ಬೇಟೆಯಾಡುವುದನ್ನು ನಿಯಂತ್ರಿಸುವ ಸಲುವಾಗಿ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಹೆಚ್ಚಿನ ಅರಣ್ಯ ಸಿಬ್ಬಂದಿ ನೇಮಿಸಿ ಗಸ್ತು ಹೆಚ್ಚಿಸಲಾಗಿದೆ.
ರಾಷ್ಟ್ರಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ನೆರೆಯ ಕೇರಳದ ಪಾಲಕ್ಕಾಡ್ ಬಳಿ ಗರ್ಭಿಣಿ ಆನೆಯ ದುರಂತ ಸಾವಿನ ನಂತರ ಅರಣ್ಯಾಧಿಕಾರಿಗಳು ಕೇರಳದೊಂದಿಗೆ ಗಡಿ ಹಂಚಿಕೊಳ್ಳುವ ಜಿಲ್ಲೆಯ ಎಲ್ಲ ಏಳು ಅರಣ್ಯ ವಲಯಗಳಲ್ಲಿ ಅರಣ್ಯ ಸಿಬ್ಬಂದಿ ಮತ್ತು ಪೊಲೀಸರ ಕಣ್ಗಾವಲು ಹೆಚ್ಚಿಸಿದ್ದು, ರೈತರು ಮತ್ತು ಅಕ್ರಮ ಬೇಟೆಯಲ್ಲಿ ತೊಡಗುವವರಿಗೆ ಕಾಡು ಪ್ರಾಣಿಗಳನ್ನು ಹಿಡಿಯಲು ಅಥವಾ ಕೊಲ್ಲಲು ಸ್ಫೋಟಕ, ಬಲೆ ಬಳಸದಂತೆ ಎಚ್ಚರಿಕೆ ನೀಡಿದ್ದಾರೆ.
ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಈ ಪ್ರದೇಶದಲ್ಲಿ ಈಗಾಗಲೇ ಕಳ್ಳ ಬೇಟೆ ಮತ್ತು ರೈತರು ಸ್ಫೋಟಕಗಳು ಬಳಸುವುದು ಗಮನಾರ್ಹವಾಗಿ ಕಡಿಮೆಯಾಗಿದೆ. ಆದರೂ ಕೆಲವೊಂದು ಸಲ ಪಟಾಕಿ ಮತ್ತು ಇತರ ಕಂಟ್ರಿ ಮೇಡ್ ಸ್ಫೋಟಕಗಳನ್ನು ಆಹಾರ ವಸ್ತುಗಳಲ್ಲಿ ತುಂಬಿ ಪ್ರಾಣಿಗಳಿಗೆ ನೀಡುತ್ತಿರುವ ಘಟನೆಗಳು ವರದಿಯಾಗುತ್ತಲೇ ಇವೆ. ಹೀಗಾಗಿ ಅಧಿಕಾರಿಗಳು ಕಳ್ಳ ಬೇಟೆಗಾರರು ಮತ್ತು ರೈತರ ಮೇಲೆ ಹೆಚ್ಚಿನ ನಿಗಾ ಇಟ್ಟಿದ್ದಾರೆ.
ಜಿಲ್ಲೆಯ ಪೆರಿಯಾನೈಕೆನ್ ಪಳಾಯಂ ಮತ್ತು ಸಿರುಮುಗೈ ಅರಣ್ಯ ವಲಯಗಳಲ್ಲಿ ಕಾಡು ಹಂದಿಗಳನ್ನು ಕೊಲ್ಲಲು ಕಂಟ್ರಿ ಮೇಡ್ ಸ್ಫೋಟಕಗಳ ಬಳಕೆ ಮಾಡುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದೆ. ಕೆಲವೊಮ್ಮೆ ರೈತರು ಕೂಡ ತಮ್ಮ ಕೃಷಿಯನ್ನು ಉಳಿಸಿಕೊಳ್ಳಲು ಇಂತಹ ಕೃತ್ಯಗಳನ್ನು ಮಾಡುತ್ತಾರೆ. ಕೆಲ ತಿಂಗಳ ಹಿಂದೆ ಮೆಟ್ಟುಪಾಳಯಂ ಮತ್ತು ಪೆರಿಯಾನಾಯ್ಕನ್ ಪಳಾಯಂ ಅರಣ್ಯ ವಲಯಗಳಲ್ಲಿ ಸ್ಫೋಟಕ ತುಂಬಿದ ಆಹಾರ ಸೇವಿಸಿ ನಾಲ್ಕು ಹಸುಗಳು ಸಾವನ್ನಪ್ಪಿದ ಘಟನೆ ನಡೆದಿತ್ತು. ಘಟನೆ ಎಷ್ಟು ಕ್ರೂರವಾಗಿತ್ತೆಂದರೆ ಸ್ಪೋಟದ ತೀವ್ರತೆಗೆ ಹಸುಗಳ ತಲೆ ಮತ್ತು ದೇಹ ಬೇರ್ಪಟ್ಟಿದ್ದವು.